ಕಾಸರಗೋಡು: ಬಹುಪತ್ನಿ ವಲ್ಲಭನೊಬ್ಬನ ಅಸಲಿ ಮುಖ ಫೇಸ್ ಬುಕ್ ನಿಂದಾಗಿ ಬಯಲಾಗಿದೆ.ಇದೀಗ ನಾಲ್ವರು ಪತ್ನಿಯರ ಮುದ್ದಿನ ಗಂಡ ಜೈಲು ಪಾಲಾಗಿದ್ದಾನೆ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ ದೀಪು ಫಿಲಿಪ್ (36) ಬಂಧಿತ ಆರೋಪಿ.
ಅಂದ್ಹಾಗೆ ದೀಪು ಸ್ಟೋರಿ ಯಾವ ಸಿನಿಮಾ ಕಥೆಗೂ ಕಮ್ಮಿ ಇಲ್ಲ. ಆರೋಪಿ ದೀಪು ಫಿಲಿಫ್ ಕಾಸರಗೋಡು ಜಿಲ್ಲೆಯವನು. ಈತ 10 ವರ್ಷಗಳ ಹಿಂದೆ ಕಾಸರಗೋಡಿನ ವೆಳ್ಳರಿಕುಂಡುವಿನ ಯುವತಿಯನ್ನು ಮದುವೆಯಾಗಿದ್ದ , ಇಬ್ಬರಿಗೆ ಎರಡು ಮಕ್ಕಳಿದ್ದಾರೆ. ಮಕ್ಕಳಾದ ಸ್ವಲ್ಪ ಸಮಯದ ನಂತರ ದೀಪು ಫಿಲಿಫ್ ಹೆಂಡತಿಯ ಚಿನ್ನ ಮತ್ತು ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈ ಬಳಿಕ ಆರೋಪಿ ದೀಪು ಕಾಸರಗೋಡಿನ ಇನ್ನೊಬ್ಬ ಮಹಿಳೆಯೊಂದಿಗೆ ತಮಿಳುನಾಡಿಗೆ ಹೋಗಿ ಮದುವೆಯಾಗಿ ಅವಳೊಂದಿಗೆ ಸ್ವಲ್ಪ ಸಮಯ ಇದ್ದು ಅಲ್ಲಿಂದಲೂ ಪರಾರಿಯಾಗಿ, ಮತ್ತೆ ಕೇರಳದ ಎರ್ನಾಕುಲಂಗೆ ಬಂದಿದ್ದ. ಈ ವೇಳೆ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದ, ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಅಲಪ್ಪುಳ ಮೂಲದ ಮಹಿಳೆಯೊಬ್ಬರು ಪರಿಚಯವಾಗಿದ್ದು, ಆಕೆಯನ್ನು ಮದುವೆಯಾಗಿದ್ದಾನೆ. ಪ್ರತಿ ಬಾರಿಯೂ ಮದುವೆಯಾಗುವಾಗ ನಾನು ಅನಾಥ, ಒಂಟಿ ಜೀವನ ನಡೆಸಲು ಆಗುವುದಿಲ್ಲ ಎಂದು ನಂಬಿಕೆ ಬರುವ ಹಾಗೆ ಕಥೆ ಕಟ್ಟುತ್ತಿದ್ದ . ಈತನ ಕರುಣಾಜನಕ ಕಥೆ ಕೇಳಿ ಮಹಿಳೆಯರು ಈತನ ಬಲೆಗೆ ಬೀಳುತ್ತಿದ್ದರು.
ಒಟ್ಟು ನಾಲ್ಕು ಮದುವೆಯಾಗಿ ಆರಾಮಾಗಿದ್ದ ದೀಪು ಸಿಕ್ಕಿಬಿದ್ದಿದ್ದು ಮಾತ್ರ ಇಂಟರೆಸ್ಟಿಂಗ್ ಸ್ಟೋರಿ, ದೀಪುವಿನ ಮೂರನೆ ಹೆಂಡತಿ ಮತ್ತು ನಾಲ್ಕನೇ ಹೆಂಡತಿ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದಾರೆ. ಈ ವೇಳೆ ನಾಲ್ಕನೇ ಹೆಂಡತಿ ಫೇಸ್ ಬುಕ್ ನಲ್ಲಿ ಆರೋಪಿ ದೀಪುವಿನ ಜೊತೆ ಇರುವ ಪೋಟೋ ಹಾಕಿದ್ದಾಳೆ. ಇದು ಮೂನೆ ಹೆಂಡತಿ ನೋಡಿ ಶಾಕ್ ಆಗಿದ್ದಾಳೆ. ಬಳಿಕ ಇಬ್ಬರು ಪರಸ್ಪರ ಮಾತನಾಡಿದಾಗ ದೀಪುವಿನ ಅಸಲಿ ಸ್ಟೋರಿ ಹೊರಬಂದಿದೆ. ಈ ವೇಳೆ ನಾಲ್ಕನೆ ಹೆಂಡತಿಗೆ ಅಪಘಾತದಲ್ಲಿ ಸಿಕ್ಕ ವಿಮೆಯ ಹಣ ಪಡೆದ ಬಳಿಕ ಆತ ಆಸಕ್ತಿ ಕಳೆದುಕೊಂಡ ಬಗ್ಗೆ ಅನುಮಾನವಿತ್ತು, ಇದೀಗ ಸಂಪೂರ್ಣ ಸ್ಟೋರಿ ತಿಳಿದ ಕೂಡಲೇ ಅವರು ಸೀದಾ ಪೊಲೀಸರ ಬಳಿಗೆ ಹೋಗಿ ವಂಚನೆ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದಾರೆ. ಇದರಂತೆ ಆರೋಪಿಯನ್ನು ಕಾಸರಗೋಡಿನಲ್ಲಿ ಅರೆಸ್ಟ್ ಮಾಡಿದ್ದಾರೆ.