Saturday, December 7, 2024
Homeಮಹಾನ್ಯೂಸ್ಎನ್ ಕೌಂಟರ್ ದಯಾನಾಯಕ್ ಬರಿ ಹೆಸರಲ್ಲ.. ಅದೊಂದು ಶಕ್ತಿ

ಎನ್ ಕೌಂಟರ್ ದಯಾನಾಯಕ್ ಬರಿ ಹೆಸರಲ್ಲ.. ಅದೊಂದು ಶಕ್ತಿ

spot_img
- Advertisement -
- Advertisement -

ಕಾರ್ಕಳ ತಾಲೂಕಿನ ಪುಟ್ಟ ಗ್ರಾಮವಾದ ಎಣ್ಣೆಹೊಳೆಯಿಂದ ಮುಂಬಯಿಗೆ ಬಂದು ಪೋಲಿಸ್ ಇಲಾಖೆ ಸೇರಿದ ಕೊಂಕಣಿ ಯುವಕ ಇಂದು ಅದೇ ಇಲಾಖೆಯಲ್ಲಿ 25 ವರ್ಷಗಳ ಸೇವೆಯನ್ನು ಪೂರೈಸಿ ಮುಂದುವರೆದಿದ್ದಾರೆ. ಅವರ ಬದುಕೇ ಒಂದು ಹೋರಾಟದ ಯಶೋಗಾಥೆ!
ಎಣ್ಣೆಹೊಳೆಯ ಅತ್ಯಂತ ಬಡಕುಟುಂಬದಲ್ಲಿ ಹುಟ್ಟಿ, ತನ್ನಜ್ಜ ಆರಂಭಿಸಿದ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವರು ನಾಯಕರು. ಆ ಶಾಲೆಯ ಅಧ್ಯಾಪಕರು ನನ್ನಲ್ಲಿ ಶಿಸ್ತನ್ನು ತುಂಬಿದರು ಎಂದು ಅವರು ಹೇಳಿದ್ದಾರೆ. ಮನೆಯಲ್ಲಿ ಕಷ್ಟಗಳು ಹೆಚ್ಚಾದಾಗ ಊರಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ಅವರ ತಂದೆ ಅವರನ್ನು ಮುಂಬಯಿಗೆ ದುಡಿಯಲು ಕಳಿಸಿದರು. ಆಗ ಅವರಿಗೆ ಕೇವಲ 14 ವರ್ಷ. ಸಣ್ಣ ಕ್ಯಾಂಟೀನಿನಲ್ಲಿ ಸಪ್ಲಾಯರ್ ಆಗಿ ದುಡಿಯುತ್ತ ಅದರ ಜೊತೆಗೆ ವಿದ್ಯಾಭ್ಯಾಸ ಮುಂದುವರಿಸಿದರು. ಡಿ.ಎನ್. ನಗರದ ಸಿ.ಈ.ಎಸ್. ಕಾಲೇಜಿನಲ್ಲಿ ಪದವಿ ದೊರೆಯಿತು. ಆರಂಭದಲ್ಲಿ ಪ್ಲಂಬಿಂಗ್ ಸೂಪರ್ವೈಸರ್ ಕೆಲಸ ದೊರಕಿತು. ತಿಂಗಳಿಗೆ 3,000ರೂ. ಸಂಬಳ. ಹಳ್ಳಿಯಿಂದ ಬಂದು ಗಾಡ್ ಫಾದರ್ ಇಲ್ಲದೆ ಮಹಾನಗರದಲ್ಲಿ ಹೆಜ್ಜೆಯೂರುವುದು ಎಷ್ಟು ಕಷ್ಟ ಎಂದು ನಮಗೆಲ್ಲ ಗೊತ್ತಿದೆ.


ದಯಾನಾಯಕರು ಪೋಲಿಸ್ ಇಲಾಖೆ ಸೇರಲೆಂದು ಕಠಿಣ ತರಬೇತಿ ಪಡೆದರು. 1995ರಲ್ಲಿ ಆಯ್ಕೆ ಕೂಡ ಆದರು. ಅವರ ದೇಹಧಾರ್ಢ್ಯತೆ, ಧೈರ್ಯ, ದಿಟ್ಟತನ ಅವರಿಗೆ ಫಲನೀಡಿದವು. ಮೊದಲು ಜುಹೂ ಠಾಣೆಯ ಎಸ್ಸೈ ಆಗಿ ಅಧಿಕಾರ ಸ್ವೀಕಾರ. ಭೂಗತದೊರೆಗಳು ಮುಂಬಯಿಯನ್ನು ಆಳುತ್ತಿದ್ದ ಕರಾಳ ದಿನಗಳವು. ದಾವೂದ್ ಇಬ್ರಾಹಿಂ, ಛೋಟಾರಾಜನ್, ಅರುಣ್ ಗಾವ್ಲಿ..ಮೊದಲಾದವರ ಕಪಿಮುಷ್ಟಿಯಲ್ಲಿ ಮುಂಬಯಿ ನಲುಗುತ್ತಿತ್ತು. 31 ಡಿಸೆಂಬರ್ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಛೋಟಾ ರಾಜನ್ ಬಣದ ಇಬ್ಬರು ರೌಡಿಗಳನ್ನು ಹೊಡೆದು ಉರುಳಿಸುವ ಮೂಲಕ ಅವರ ಬೇಟೆ ಆರಂಭವಾಯಿತು. ಗ್ಯಾಂಗ್ ಸ್ಟರಗಳ ಹುಟ್ಟಡಗಿಸುವ ಸ್ಪೆಶಲ್ ಸ್ಕ್ವಾಡಿನ ಇನ್ಸಪೆಕ್ಟರ್ ಆಗಿ ಕೆಲವೇ ವರ್ಷಗಳಲ್ಲಿ ದಯಾನಾಯಕರು 83 ಗ್ಯಾಂಗ್ ಸ್ಟರಗಳನ್ನು ಎನ್ಕೌಂಟರ್ ಮಾಡಿ ಬಿಸಾಡಿಯಾಗಿತ್ತು! ನನಗೆ ಎನ್ಕೌಂಟರ್ ಮಾಡುವ ಆಸಕ್ತಿ ಇರಲಿಲ್ಲ, ಆದರೆ ಜನಸಾಮಾನ್ಯರ ರಕ್ತ ಹರಿಸಲು ಭೂಗತ ದೊರೆಗಳು ಮುಂದಾದಾಗ, ಹಫ್ತಾ ವಸೂಲಿಯಲ್ಲಿ ತೊಡಗಿದಾಗ, ಎರೆಸ್ಟ ಮಾಡಲು ಹೋದಾಗ ನಮ್ಮ ಮೇಲೇ ಗುಂಡು ಹಾರಿಸಿದಾಗ ಎನ್ಕೌಂಟರ್ ಅನಿವಾರ್ಯವಾಯಿತು ಎಂದವರು ಹೇಳಿದ್ದಾರೆ.


ಒಮ್ಮೆ ಅವರ ಮೇಲೇ ಗುಂಡಿನ ಧಾಳಿ ನಡೆದು ಅವರು ತೀವ್ರವಾಗಿ ಗಾಯಗೊಂಡದ್ದೂ ಇದೆ. ಅಪಾಯವನ್ನೇ ಹೊದ್ದು ಮಲಗಿದವರಿಗೆ ಭಯ ಇರದು. ಅವರಿಗೆ ಅಪಾರ ಜನ ಬೆಂಬಲ ವ್ಯಕ್ತವಾಯಿತು. ತಮ್ಮ ತಾಯಿಯ ಹೆಸರಿನಲ್ಲಿ ತನ್ನ ಹುಟ್ಟೂರಾದ ಎಣ್ಣೆಹೊಳೆಯಲ್ಲಿ 2000ನೇ ಇಸವಿಯಲ್ಲಿ ಒಂದು ಪ್ರೌಢಶಾಲೆಯನ್ನು ತೆರೆದು ಅದನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದರು. ಎಣ್ಣೆಹೊಳೆಯ ರಾಧಾ ನಾಯಕ್ ಸರಕಾರಿ ಪ್ರೌಢಶಾಲೆ ಇಂದು ನೂರಾರು ಬಡ ವಿದ್ಯಾರ್ಥಿಗಳಿಗೆ ಉಚಿತ- ಮೌಲ್ಯಯುತ ಶಿಕ್ಷಣ ನೀಡುತ್ತಿದೆ. ವ್ಯಕ್ತಿ ಜನಪ್ರಿಯನಾದಂತೆ ಅವರ ಇಲಾಖೆಯಲ್ಲೇ ಕಿರುಕುಳದ ವಿಚಾರಣೆಗಳು ಆರಂಭವಾದವು. ಅವರ ಕೆಲವು ಸಹೋದ್ಯೋಗಿಗಳು ಭೂಗತದೊರೆಗಳೊಂದಿಗೆ ಕೈಮಿಲಾಯಿಸಿ ನಾಯಕರ ಮೇಲೆ ಆರೋಪಗಳನ್ನು ಸುರಿದರು. ಆವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದವು. ಮನೆಯ ಮೇಲೆ ಆದಾಯ ತೆರಿಗೆ ಧಾಳಿಗಳಾದವು. ದಯಾ ನಾಯಕರು ಎಲ್ಲಾ ವಿಚಾರಣೆಗಳನ್ನು ತಾಳ್ಮೆಯಿಂದ ಎದುರಿಸಿ ಎಲ್ಲ ಕೇಸುಗಳನ್ನು ಗೆದ್ದುಬಂದರು. ಇದೀಗ ಮತ್ತೆ ಪವರ್ ಫುಲ್ ಆಗಿ ಪೋಲೀಸ್ ಇಲಾಖೆಯಲ್ಲಿ ವಿಜ್ರಂಭಿಸುತ್ತಿದ್ದಾರೆ. ಅವರ ಬದುಕಿನಿಂದ ಸ್ಫೂರ್ತಿ ಪಡೆದು ಹಿಂದಿಯಲ್ಲಿ ಅಬ್ ತಕ್ ಛಪ್ಪನ್ ( ಭಾಗ 1 ಮತ್ತು 2), ಕಗಾರ್, ರಿಸ್ಕ್, ಡಿಪಾರ್ಟಮೆಂಟ್, ಕನ್ನಡದಲ್ಲಿ ಎನ್ಕೌಂಟರ್ ದಯಾನಾಯಕ್, ತೆಲುಗಿನಲ್ಲಿ ಗೋಲಿಮಾರ್, ಸಿಧ್ಧಂ..ಮೊದಲಾದ ಸಿನಿಮಾಗಳು ಬೆಳ್ಳಿತೆರೆಗೆ ಬಂದು ಯಶಸ್ವಿಯಾಗಿವೆ. ಅವರ ಬದುಕು ಸಾವಿರಾರು ಯುವಕರಿಗೆ ಸ್ಫೂರ್ತಿ ನೀಡಿದೆ..

- Advertisement -
spot_img

Latest News

error: Content is protected !!