ನವದೆಹಲಿ: ಪತ್ನಿಯ ಅಕ್ರಮ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಆಕೆಯ ಲವರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಇಬ್ಬರು ನಕಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯರನ್ನು ಬಾಡಿಗೆ ಪಡೆದು ಮೂವರಿಗೆ ವಿಷವುಣಿಸಿ ಕೊಲೆಗೆ ಯತ್ನಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಹೌದು, ಪ್ರದೀಪ್ ಎಂಬಾತ ತನ್ನ ಪತ್ನಿ ಹೋಂ ಗಾರ್ಡ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತ್ನಿಯ ಲವರ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾನೆ. ಇದಕ್ಕಾಗಿ ನಕಲಿ ಆರೋಗ್ಯ ಕಾರ್ಯಕರ್ತೆಯರನ್ನು ಬಳಸಿಕೊಂಡಿದ್ದಾನೆ.
ಕೊರೊನಾ ಜಾಗೃತಿ ಮೂಡಿಸುವ ಸಂಬಂಧ ಹೋಂ ಗಾರ್ಡ್ ಮನೆಗೆ ಇಬ್ಬರು ನಕಲಿ ಆರೋಗ್ಯ ಕಾರ್ಯಕರ್ತೆಯರು ಹೋಗಿದ್ದಾರೆ. ಈ ವೇಳೆ ವಿಷದ ಬಾಟಲಿಗಳನ್ನು ಹೋಂಗಾರ್ಡ್ ಕುಟುಂಬಕ್ಕೆ ನೀಡಿ, ಇದು ಕೊರೊನಾ ವಿರುದ್ಧ ಹೋರಾಡುವ ಔಷಧ ಎಂದು ಹೇಳಿದ್ದಾರೆ. ಇದನ್ನು ನಿಜ ಎಂದು ನಂಬಿದ ಆ ಕುಟುಂಬ ಬಾಟಲಿಯಲ್ಲಿರುವುದನ್ನು ಕುಡಿದಿದ್ದಾರೆ. ನಂತರ ಅನಾರೋಗ್ಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅದೃಷ್ಟವಶಾತ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಇನ್ನು ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ ಹೋಂ ಗಾರ್ಡ್ ನಡೆದ ಘಟನೆಯನ್ನು ವಿವರಿಸಿದ್ದಾನೆ. ನಂತರ ನಕಲಿ ಆರೋಗ್ಯ ಕಾರ್ಯಕರ್ತೆಯರನ್ನು ವಿಚಾರಿಸಿದಾಗ ಸತ್ಯಾಂಶ ಹೊರ ಬಿದ್ದಿದೆ. ಸದ್ಯ ಪ್ರದೀಪ್ ಹಾಗೂ ನಕಲಿ ಆರೋಗ್ಯ ಕಾರ್ಯಕರ್ತೆಯರನ್ನು ಪೊಲೀಸರು ಬಂಧಿಸಿದ್ದಾರೆ.