ಬೆಳ್ತಂಗಡಿ : ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲೆಯಡ್ಕ ಎಂಬಲ್ಲಿ ನಡೆಯುತ್ತಿರುವ ಮುಗ್ರೋಡಿ ಕಂಪನಿಯ(MCK) ಮಿಕ್ಸರ್ ಘಟಕದ ವಿರುದ್ದ ಸ್ಥಳೀಯ ಜನರು ಗ್ರಾಮ ಪಂಚಾಯತಿನ ಎದುರು ಜ.13 ರಂದು ಗುಮ್ಮಟೆ ಚಳವಳಿಯನ್ನು ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಮಲೆಯಡ್ಕ ಎಂಬಲ್ಲಿ ನಡೆಯುತ್ತಿರುವ ಮುಗ್ರೋಡಿ ಹಾಟ್ ಮಿಕ್ಸ್ ಘಟಕದ ತ್ಯಾಜ್ಯ ನೀರು ನೇರವಾಗಿ ಇಲ್ಲಿ ಹರಿಯುತ್ತಿರುವ ತೋಡನ್ನು ಸೇರುತಿದ್ದು ಇದರಿಂದಾಗಿ ಇಲ್ಲಿನ ಕುಡಿಯುವ ನೀರು ಸಂಪೂರ್ಣ ಕಲುಷಿತವಾಗಿದೆ ರಾತ್ರಿ ಹಗಲು ಎನ್ನದೆ ಇಲ್ಲಿ ಕೆಲಸ ನಡೆಯುತ್ತಿದ್ದು ಸದಾ ಹೊಗೆಯನ್ನು ಹೊರ ಬಿಡಲಾಗುತ್ತಿದೆ, ಇದರಿಂದಾಗಿ ಸ್ಥಳೀಯ ನಿವಾಸಿಗಳ ಆರೋಗ್ಯ ಹದಗೆಟ್ಟಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಕಂಪೆನಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ನಮಗೆ ಬದುಕುವ ಹಕ್ಕನ್ನು ನೀಡಿ ಎಂಬ ಘೋಷಣೆಯೊಂದಿಗೆ ಸ್ಥಳೀಯ ಆದಿವಾಸಿ ಸಮುದಾಯ ತಮ್ಮ ಸಾಂಪ್ರದಾಯಿಕ ವಾದ್ಯ ಗುಮ್ಮಟೆ ಯನ್ನು ಬಡಿದು ತಮ್ಮ ಪ್ರತಿಭಟನನೆಯನ್ನು ವ್ಯಕ್ತಪಡಿಸಿದರು.

ನಡ ಗ್ರಾಮ ಪಂಚಾಯತಿನ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸ್ಥಳೀಯರು ನಮ್ಮನ್ನು ಬದುಕಲು ಬಿಟ್ಟು ಅಭಿವೃದ್ಧಿ ಮಾಡಿ ಎಂಬ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಪ್ರತಿಭಟನೆಯ ಬಳಿಕ ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಲಾಯಿತು. ಜನವಸತಿ ಪ್ರದೇಶದಲ್ಲಿರುವ ಮಿಕ್ಸಿಂಗ್ ಘಟಕದ ಕಾರ್ಯ ನಿರ್ವಹಣೆಯನ್ನು ಕೂಡಲೇ ಸ್ಥಗಿತ ಗೊಳಿಸಬೇಕು, ಮಾಲಿನ್ಯವನ್ನು ನದಿ ನೀರಿಗೆ ಹರಿಯ ಬಿಡುತ್ತಿರುವುದರ ವಿರುದ್ದ ಕ್ರಮ ಕೈಗೊಳ್ಳಬೇಕು, ಕೃಷಿ ಭೂಮಿ, ಕುಡಿಯುವ ನೀರನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು, ಮಾಲಿನ್ಯಕಾರಕವಾದ ಹೊಗೆಯಿಂದ ಆರೋಗ್ಯ ಸಮಸ್ಯೆ ಸೃಷ್ಟಿಯಾಗುತ್ತಿದೆ ಮುಂತಾದ ವಿಚಾರಗಳನ್ನು ಮುಂದಿಟ್ಟು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮನವಿ ನೀಡಿದರು.

ಮಲೆಯಡ್ಕ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರಾದ ರಾಜೇಶ್ ಬಿಲ್ಲವ, ಸಂಚಾಲಕರಾದ ಕೊರಗಪ್ಪ ಗೌಡ, ರಮೇಶ್ ಮೊಗೇರ, ಸತೀಶ್ ನಾಯ್ಕ, ಸದಾಶಿವ ನಾಯ್ಕ, ನಾರಾಯಣ ನಾಯ್ಕ, ತಿಮ್ಮಯ್ಯ ನಾಯ್ಕ, ಸುಮಂಗಲಾ ಜಿನ್ನಪ್ಪ ನಾಯ್ಕ ಮುತ್ತಪ್ಪ ನಾಯ್ಕ, ಉಜಿರೆ, ಅತ್ತಾಜೆ ಮಾಚಾರು,ಸೋಮಂತಡ್ಕ ಕೂಡುಕಟ್ಟು ನಿವಾಸಿಗಳು ತಾಲೂಕು ಮರಾಟಿ ಸಮುದಾಯದ ಪ್ರಮುಖರಾದ ಸಂತೋಷ್ ಅತ್ತಾಜೆ, ಹರ್ಷಿತ್ ಕೊಡಂಗೆ, ಪ್ರಶಾಂತ್ ಯು.ಪಿ ವಸಂತ ನಡ ಮತ್ತು ಪದ್ಮನಾಭ ಗೌಡ ಸುರ್ಯ, ಕೊರಗಪ್ಪ ಗೌಡ, ಸ್ಟ್ಯಾನ್ಲಿ ಪಿಂಟೋ, ವಿಜಯ ಗೌಡ, ಸುಕೇಶ್ ಸುರ್ಯ ಮತ್ತಿತರರು ಉಪಸ್ಥಿತರಿದ್ದರು.



