ಪುತ್ತೂರು; ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ. ನಿಜಕ್ಕೂ ಈ ಘಟನೆ ನೋಡಿದ್ರೆ ಈ ಮಾತು ಅಕ್ಷರಶಃ ಸತ್ಯ ಅನ್ಸುತ್ತೆ. ಪುತ್ತೂರಿನ ವೈದ್ಯರಿಬ್ಬರು ಒಂದು ವರ್ಷದಿಂದ ಮಗುವಿನ ಗಂಟಲಲ್ಲಿ ಸಿಲುಕಿದ್ದ ಕಾಡಿಗೆ ಡಬ್ಬವನ್ನು ಹೊರ ತೆಗೆದು ಆ ಮಗುವಿಗೆ ಮರುಜನ್ಮ ನೀಡಿದ್ದಾರೆ.
ಪುತ್ತೂರಿನ ನಿವಾಸಿ ಸದ್ಯ ಬೆಂಗಳೂರಿನಲ್ಲಿರುವ ಮಂಜು ಹಾಗೂ ವಿಶಾಲಾಕ್ಷಿ ದಂಪತಿಯ ಒಂದೂವರೆ ವರ್ಷದ ಗಂಡು ಮಗು ಆರ್ಯನ್ ವರ್ಷದ ಹಿಂದೆ ಜುಲೈಯಲ್ಲಿ ಸಣ್ಣದಾದ ಕಾಡಿಗೆ ಡಬ್ಬವನ್ನು ನುಂಗಿತ್ತು. ಆದರೆ ಈ ವಿಚಾರ ಮನೆಯವರಿಗೆ ತಿಳಿದಿರಲಿಲ್ಲ. ಕಾಡಿಗೆ ಡಬ್ಬ ಗಂಟಲಲ್ಲೇ ಇದ್ದ ಕಾರಣ ಮಗು ಊಟ ಮಾಡಲಾಗದೇ, ಮಾತನಾಡಲೂ ಆಗದ ಪರಿಸ್ಥಿತಿಯಲ್ಲಿತ್ತು. ಬೆಂಗಳೂರು ಸಹಿತ ಹಲವು ಕಡೆಗಳಲ್ಲಿ ಮಗುವನ್ನು ವೈದ್ಯರಿಗೆ ತೋರಿಸಿದರೂ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದರು, ಸ್ಕ್ಯಾನಿಂಗ್ ನಲ್ಲೂ ಯಾವುದೇ ವಸ್ತು ಪತ್ತೆಯಾಗಿರಲಿಲ್ಲ. ಅಲ್ಲದೆ ಎಲ್ಲಾ ವೈದ್ಯರು ಮಗುವಿಗೆ ಕಫಗಳಿಗೆ ಔಷಧ ನೀಡುತ್ತಿದ್ದರು ಹೊರತು ಯಾವುದೇ ರೀತಿಯ ಪರಿಹಾರ ಸಿಕ್ಕಿರಲಿಲ್ಲ.
ಇತ್ತೀಚೆಗೆ ಪುತ್ತೂರಿನ ನೆಹರು ನಗರದಲ್ಲಿರುವ ತನ್ನ ಅಕ್ಕನ ಮನೆಗೆ ಬಂದಿದ್ದ ಮಗುವಿನ ತಾಯಿ ಅಕ್ಟೋಬರ್ 13ರಂದು ಮಗುವಿನ ಕಫ, ಕೆಮ್ಮುವಿಗೆ ಚಿಕಿತ್ಸೆಗೆಂದು ಮಕ್ಕಳ ತಜ್ಞೆ ಡಾ. ಅರ್ಚನಾ ಕರಿಕ್ಕಳ ಬಳಿ ಬಂದಿದ್ದರು. ಅವರು ಪರೀಕ್ಷಿಸಿದಾಗ ಮಗುವಿಗೆ ಕೆಮ್ಮು, ಕಫದ ಸಮಸ್ಯೆಯಲ್ಲ. ಮಗುವಿನ ಗಂಟಲಿನಲ್ಲಿ ಯಾವುದೋ ವಸ್ತು ಸಿಲುಕಿಕೊಂಡಿರುವ ಬಗ್ಗೆ ಬಲವಾದ ಅನುಮಾನ ಉಂಟಾಗಿತ್ತು. ಹೀಗಾಗಿ ಅವರು ನೇರವಾಗಿ ಇಎನ್‌ಟಿ ತಜ್ಞ ಡಾ| ರಾಮಮೋಹನ ಅವರ ಬಳಿಗೆ ಕಳುಹಿಸಿದ್ದರು. ಮಗುವನ್ನು ಪರೀಕ್ಷಿಸಿದ ಡಾ| ರಾಮಮೋಹನ್ ಅವರಿಗೆ ಮಗುವಿನ ಗಂಟಲಿನಲ್ಲಿ ಯಾವುದೋ ವಸ್ತು ಸಿಲುಕಿಕೊಂಡಿರುವುದು ಗೋಚರಿಸಿತ್ತು. ಬಳಿಕ ಮಗುವಿಗೆ ಚಿಕಿತ್ಸೆ ನೀಡಿದ ವೈದ್ಯರು ಗಂಟಲಿಲ್ಲಿ ಸಿಲುಕಿಕೊಂಡಿರುವ ವಸ್ತುವನ್ನು ಕೈಯಿಂದಲೇ ಹೊರೆ ತೆಗೆದಾಗ, ಮುಚ್ಚಳ ಸಹಿತವಾಗಿದ್ದ ಕಾಡಿಗೆ ಡಬ್ಬವಾಗಿತ್ತು. ಸದ್ಯ ಮಗು ಆರೋಗ್ಯವಾಗಿದೆ. ಇದೀಗ ವೈದ್ಯರಿಬ್ಬರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


