ಮಂಗಳೂರು: ನಿನ್ನೆ ಫಲ್ಗುಣಿ ನದಿ ನೀರು ನುಗ್ಗಿದ್ದ ಪರಿಣಾಮ ಜಲಾವೃತಗೊಂಡಿರುವ ಮಂಗಳೂರು ತಾಲೂಕಿನ ಮೊಗೇರ್ ಕುದ್ರು ಗ್ರಾಮಕ್ಕೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದಾರೆ.
ನೀರು ತುಂಬಿಕೊಂಡಿರುವ ಕಾರಣ ದೋಣಿ ಮೂಲಕ ಗ್ರಾಮಕ್ಕೆ ತೆರಳಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್ ಮತ್ತು ಮಂಗಳೂರು ಎಸಿ ಹರ್ಷವರ್ಧನ್ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ್ದಾರೆ.
ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ಸಂತ್ರಸ್ಥರು ಈ ವೇಳೆ ವಿವರಿಸಿದ್ದಾರೆ.
ಮಳೆಗಾಲ ಮುಗಿದ ಕೂಡಲೇ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಜಿಲ್ಲಾಧಿಕಾರಿ, ಸಂತ್ರಸ್ತರಾಗಿರುವ 80 ಜನರನ್ನು ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆ ಎದುರಾಗಿದ್ದು, ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲಿಸಿದ್ದಾರೆ.


