ಧರ್ಮಸ್ಥಳ: ನಾಡಿನ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವಾರ್ಷಿಕವಾಗಿ ನಡೆಯುವ ವಿಷು ಮಾಸದ ಜಾತ್ರೆಯನ್ನು ದೇವಪ್ರಶ್ನೆಯ ಮೂಲಕ ಪರಿಶೀಲಿಸಲಾಗಿ ನೇಮ ಕೋಲ ರಥೋತ್ಸವ ಇತ್ಯಾಧಿ ಪೂರಕ ಧಾರ್ಮಿಕ ಕಾರ್ಯಕ್ರಮಗಳೆಲ್ಲವನ್ನು ರದ್ದುಪಡಿಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಸಾಂಪ್ರಾದಾಯಿಕವಾಗಿ ನಡೆಯುವ ಶ್ರೀ ಧರ್ಮದೇವತೆಗಳ, ಶ್ರೀ ಅಣ್ಣಪ್ಪ ಸ್ವಾಮಿಯ ನೇಮ – ಕೋಲಗಳು, ಮುಂದೆ ಐದು ದಿನಗಳ ಕಾಲ ನಡೆಯಬೇಕಾಗಿದ್ದ ಶ್ರೀ ಮಂಜುನಾಥ ಸ್ವಾಮಿಯ ರಥೋತ್ಸವ, ವಿವಿಧ ಕಟ್ಟೆಗಳಿಗೆ ವಿಹಾರ ಇತ್ಯಾದಿಗಳ ಜೊತೆಗೆ ನೇತ್ರಾವತಿ ನದಿಗೆ ಅವಭೃತ ವಿಹಾರ ಮಾಡುವುದನ್ನೂ ರದ್ದುಪಡಿಸಲಾಗಿದೆ ಎಂದಿದ್ದಾರೆ.
ದೇವಪ್ರಶ್ನೆಯ ಮೂಲಕ ಶ್ರೀ ಸ್ವಾಮಿಯ ಒಪ್ಪಿಗೆ ಪಡೆದು ಈ ಕ್ರಮ
ಈ ಕುರಿತು ವಿಸ್ತೃತವಾಗಿ ಮಾತನಾಡಿರುವ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ದೇವರುಗಳು ಈ ರೀತಿಯ ಪರಿವರ್ತನೆಗೆ, ಬದಲಾವಣೆಗಳಿಗೆ ಮತ್ತು ಸಾಂಕೇತಿಕ ಸೇವೆಗಳಿಗೆ ಒಪ್ಪಿ ಅನುಗ್ರಹಿಸಿರುವುದನ್ನು ಪರಿಗಣಿಸಿ ಶ್ರೀ ಕ್ಷೇತ್ರದ ಭಕ್ತರು, ಅಭಿಮಾನಿಗಳು ಸರ್ಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು. ಮತ್ತು ಮುಂದಿನ ದಿನಗಳ ಸುಭೀಕ್ಷೆಗಾಗಿ ಸರಕಾರದ ಈ ಆದೇಶಗಳನ್ನು ಪರಿಪಾಲಿಸುತ್ತಾ ಸಹಕರಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಸದ್ಯಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಕ್ಷೇತ್ರಕ್ಕೆ ಬರುತ್ತಿಲ್ಲ. ಮುಂದೆ ಕೂಡಾ ಪ್ರವೇಶ, ದರ್ಶನವನ್ನು ಮುಂದಿನ ಸೂಚನೆಯತನಕ ರದ್ದುಪಡಿಸಲಾಗಿದೆ. ಈ ಎಲ್ಲವೂ ದೇವಪ್ರಶ್ನೆಯ ಮೂಲಕ ಶ್ರೀ ಸ್ವಾಮಿಯ ಒಪ್ಪಿಗೆ ಪಡೆದು ಪರಿವರ್ತನೆಗೊಂಡಿರುವುದರಿಂದ ಭಕ್ತರು ಈ ಬಗ್ಗೆ ಯಾವುದೇ ಸಂಕೋಚ ಪಡಬೇಕಾಗಿಲ್ಲ. ಈ ಸಂದರ್ಭದಲ್ಲಿ ಕೊರೋನಾ ಸೋಂಕು ರೋಗ ಮುಕ್ತಿಗಾಗಿ ನಾವೆಲ್ಲಾ ಒಟ್ಟಾಗಿ ಪ್ರಾರ್ಥನೆ ಮಾಡೋಣ ಎಂದು ಮನವಿ ಮಾಡಿಕೊಂಡಿದ್ದಾರೆ.