Saturday, June 6, 2026
Homeಕರಾವಳಿಬೆಳ್ತಂಗಡಿ: ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ : ಗ್ರಾಮಕರಣಿಕ ಮತ್ತು ಗ್ರಾಮ ಸಹಾಯಕನಿಗೆ ಶಿಕ್ಷೆ ವಿಧಿಸಿದ...

ಬೆಳ್ತಂಗಡಿ: ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ : ಗ್ರಾಮಕರಣಿಕ ಮತ್ತು ಗ್ರಾಮ ಸಹಾಯಕನಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

- Advertisement -
- Advertisement -

ಬೆಳ್ತಂಗಡಿ: ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಗ್ರಾಮಕರಣಿಕ ಮತ್ತು ಗ್ರಾಮ ಸಹಾಯಕನಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಗ್ರಾಮಕರಣಿಕನಾಗಿದ್ದ ಎನ್.ಶೇಷಾದ್ರಿ ಮತ್ತು ಗ್ರಾಮ ಸಹಾಯಕನಾಗಿದ್ದ ತಿಮ್ಮಪ್ಪ ಪೂಜಾರಿ ಶಿಕ್ಷೆಗೊಳಗಾದವರು.

2014ರ ಜೂ.24ರಂದು ವಾಸದ ಮನೆಯನ್ನು ಸಕ್ರಮಗೊಳಿಸುವ ಸಂಬಂಧ ಬೆಳ್ತಂಗಡಿ ತಾಲೂಕಿನ ಮೂರುಗೋಳಿ ಗ್ರಾಪಂ ಕಚೇರಿಯಲ್ಲಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಆಗ ತೆಕ್ಕಾರು ಬಾರ್ಯ ಪುತ್ತಿಲ ಗ್ರಾಮದ ಗ್ರಾಮಕರಣಿಕರಾಗಿದ್ದ ಎನ್. ಶೇಷಾದ್ರಿ ಮತ್ತು ಗ್ರಾಮ ಸಹಾಯಕರಾಗಿದ್ದ ತಿಮ್ಮಪ್ಪ ಪೂಜಾರಿ 15,000 ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ವ್ಯಕ್ತಿಯು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ.ಜಕಾತಿ ವಿಚಾರಣೆ ನಡೆಸಿ ಬುಧವಾರ ತೀರ್ಪು ನೀಡಿ ಆರೋಪಿಗಳಿಗೆ ಕಲಂ 235 ಸಿಆರ್‌ಪಿಸಿ ಅಡಿಯಲ್ಲಿ ಪಿಸಿ ಕಾಯಿದೆ 1988 ಕಲಂ 7ರಂತೆ 3 ವರ್ಷಗಳ ಸಾದಾ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿದ್ದಾರೆ. ಆರೋಪಿಗಳು ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 8 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಿದ್ದಾರೆ.

ಅಲ್ಲದೆ ಪಿ.ಸಿ ಕಾಯಿದೆ 1988 ಕಲಂ 13(1) (ಡಿ) ಜೊತೆಗೆ 13(2)ರಲ್ಲಿ 4 ವರ್ಷಗಳ ಸಾದಾ ಸಜೆ ಹಾಗೂ 30,000 ರೂ. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 8 ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಲೊಕಾಯುಕ್ತ ಪೊಲೀಸ್ ನಿರೀಕ್ಷಕ ಎಸ್.ವಿಜಯ ಪ್ರಸಾದ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಆರೋಪಿಗಳು ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

- Advertisement -

Latest News

error: Content is protected !!