ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುಳ್ಳು ಡೀಪ್ ಫೇಕ್ ವಿಡಿಯೋಗೆ ಟಾರ್ಗೆಟ್ ಆಗಿದ್ದಾರೆ. ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹಣಕಾಸು ಹೂಡಿಕೆ ಯೋಜನೆ ಉದ್ದೇಶಿಸಿ ಮಾತನಾಡಿರುವ ವೀಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುಳ್ಳು ಡೀಪ್ ಫೇಕ್ ವೀಡಿಯೋ ಮಾಡಿ ಸಾರ್ವಜನಿಕರಿಗೆ ಪ್ರಚೋದನೆ ನೀಡಿದ್ದಾರೆ ಎಂದು ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಲ್ಲೇಶ್ವರಂ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಮೇಶ್ ಎಸ್ ಅವರು ದೂರು ನೀಡಿದ್ದಾರೆ. ಹಣಕಾಸಿನ ಹೂಡಿಕೆ ಯೋಜನೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಡಿಯೋವನ್ನು ಡೀಪ್ ಫೇಕ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ಹೂಡಿಕೆ ಮಾಡುವ ವ್ಯಕ್ತಿಗೆ ಇದು ಆರ್ಥಿಕ ನಷ್ಟವನ್ನು ಉಂಟು ಮಾಡುವ ಸಾಧ್ಯತೆ ಇದೆ. ಸರ್ಕಾರ ಹಾಗೂ ಸಾರ್ವಜನಿಕ ಸಂಸ್ಥೆಗಳ ಮೇಲೆ ದೊಡ್ಡ ಪರಿಣಾಮವನ್ನುಂಟು ಮಾಡುವ ಸಾಧ್ಯತೆ ಇದೆ. ಹಾಗಾಗಿ ಈ ಕೃತ್ಯದಲ್ಲಿ ಶಾಮೀಲಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಈ ಎಫ್ಐಆರ್ ನಲ್ಲಿ ತಿಳಿಸಿದ್ದಾರೆ.


