Tuesday, April 16, 2024
Homeತಾಜಾ ಸುದ್ದಿಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ

ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಆರೋಪ ಮಾಡುತ್ತಿದೆ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪ

spot_img
- Advertisement -
- Advertisement -

ಬೆಂಗಳೂರು: ಕಾಂಗ್ರೆಸ್ ಪಕ್ಷದವರು ರಾಜ್ಯದ ಬಿಜೆಪಿ ಸರಕಾರ ಮಾಡಿದ ಎಲ್ಲ ಉತ್ತಮ ಕಾರ್ಯಗಳನ್ನು ಮರೆಮಾಚಿ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್‍ನ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದವರ ಅಪಪ್ರಚಾರದ ಹೊರತಾಗಿಯೂ ರಾಜ್ಯದಲ್ಲಿರುವ ದಲಿತರು, ಹಿಂದುಳಿದವರು ಮತ್ತು ಪರಿಶಿಷ್ಟ ಜಾತಿ, ಪಂಗಡದವರು ಬಿಜೆಪಿಯನ್ನು ಸ್ಪಷ್ಟವಾಗಿ ಬೆಂಬಲಿಸುತ್ತಿರುವುದು ನಮ್ಮ ಕಣ್ಣ ಮುಂದೆ ಕಂಡುಬರುತ್ತಿದೆ. ಇದರಿಂದ ಹತಾಶರಾಗಿ ಕಾಂಗ್ರೆಸ್‍ನವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಅಧಿಕಾರದಲ್ಲಿ ಇರುವಂಥ ಒಂದು ರಾಜ್ಯವನ್ನೂ ಕಳೆದುಕೊಂಡ ಕಾಂಗ್ರೆಸ್‍ನವರು ಹತಾಶ ಭಾವನೆಗೆ ಒಳಗಾಗಿದೆ. ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ಆತಂಕ ಕಾಂಗ್ರೆಸ್‍ನವರ ಮನಸ್ಸಿನಲ್ಲಿದೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಈ ಬಾರಿ ಬಜೆಟ್‍ನಲ್ಲಿ ಪರಿಶಿಷ್ಟ ಜಾತಿ- ಪಂಗಡಕ್ಕೆ 28 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ. ಕ್ರಿಯಾಯೋಜನೆಯೂ ಸಿದ್ಧವಾಗುತ್ತಿದೆ ಎಂದು ಎಂದರು.

ಹಿಂದುಳಿದ ವರ್ಗದ ಎಲ್ಲ ಜಾತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಯೋಜನೆ ಜಾರಿಗೊಳಿಸಲಾಗುತ್ತಿದೆ. ದೀನದಯಾಳ್ ಜಿ ಅವರ ಹೆಸರಿನಲ್ಲಿ ಪ್ರಥಮ ಬಾರಿಗೆ ರಾಜ್ಯದ 5 ಕೇಂದ್ರೀಕೃತ ವಿದ್ಯಾಸಂಸ್ಥೆ ಇರುವ ಕಡೆ ಸಾವಿರ ಮಕ್ಕಳ ಹಾಸ್ಟೆಲ್ ಮಾಡುತ್ತಿರುವುದು ಅದ್ಭುತ ಕಲ್ಪನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ತಮ್ಮ ಅವಧಿಯಲ್ಲಿ ಲೋಕಾಯುಕ್ತವನ್ನು ಬುಡಮೇಲು ಮಾಡಿ ಎಸಿಬಿಯನ್ನು ತಂದರು ಎಂದು ಆರೋಪಿಸಿದರಲ್ಲದೆ, ನಿಮ್ಮ ಅವಧಿಯಲ್ಲಿ ಆದ ಎಷ್ಟು ಅಕ್ರಮಗಳ ತನಿಖೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷದ ಸಮನ್ವಯದ ಕೊರತೆಯನ್ನು ಮರೆಮಾಚಲು ಬಿಜೆಪಿ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ನುಡಿದರು.

ಕಾಂಗ್ರೆಸ್‍ನ ಎಲ್ಲ ಹೇಳಿಕೆಗಳು, ಆಕ್ರೋಶಗಳು, ಮಾತುಗಳು, ವಿಚಾರಗಳು ಕೇವಲ ರಾಜಕೀಯ ಬೂಟಾಟಿಕೆಗಾಗಿ ಹಾಗೂ ಜನರ ಭಾವನೆಗಳನ್ನು ಬೇರೆ ಕಡೆ ತಿರುಗಿಸುವ ಉದ್ದೇಶವನ್ನು ಹೊಂದಿವೆ. ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವೈಫಲ್ಯವನ್ನು ಮರೆಮಾಚಲು ಇಂಥ ಟೀಕೆ ಮಾಡುತ್ತಿದ್ದಾರೆ. ಸತ್ಯಕ್ಕೆ ಅಪಚಾರವಾಗುವ ಟೀಕೆ- ಆರೋಪ ನಿಲ್ಲಿಸಿ ಎಂದು ಸಚಿವ ಕೋಟ
ಒತ್ತಾಯಿಸಿದರು.

- Advertisement -
spot_img

Latest News

error: Content is protected !!