ಬೆಳ್ತಂಗಡಿ: ಕೊರೋನಾ ವೈರಸ್ ತಡೆಗಟ್ಟಲು ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶವನ್ನು ವಿದೇಶಿ ಸಾಮ್ರಾಜ್ಯಶಾಹಿಗಳಿಗೆ ಒತ್ತೆ ಇಡಲು ಪ್ರಯತ್ನಿಸುತ್ತಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ, ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಐಟಿಯು, ಕರ್ನಾಟಕ ಪ್ರಾಂತ ರೈತ ಸಂಘ , ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಭಾರತ ರಕ್ಷಿಸಿ ಎಂಬ ಆಂದೋಲನದ ಭಾಗವಾಗಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕೊರೋನಾ ವೈರಸ್ ತಡೆಗಟ್ಟುವ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದೆ. ಇದೀಗ ಜನರನ್ನು ದೇವರೇ ರಕ್ಷಿಸಬೇಕೆಂಬ ಅತ್ಯಂತ ಬಾಲೀಶತನದ ಹೇಳಿಕೆ ನೀಡುತ್ತಿದೆ. ಇಂತಹ ಅತ್ಯಂತ ಅವಿವೇಕಿತನದ ಸರ್ಕಾರ ಮತ್ತೊಂದಿಲ್ಲ ಎಂದ ಅವರು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತ ಕಾರ್ಮಿಕರಿಗೆ ಮರಣ ಶಾಸನ ಬರೆಯಲು ಹೊರಟಿದೆ ಎಂದರು.
ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಎಲ್ ಮಾತನಾಡುತ್ತಾ ರಾಜ್ಯ, ಕೇಂದ್ರ ಸರ್ಕಾರಗಳು ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ರಕ್ಷಣೆ ಮಾಡುವ ಬದಲಾಗಿ ಗೋವು ರಕ್ಷಣೆ ಹೆಸರಿನಲ್ಲಿ ಸಂಘಪರಿವಾರದ ಗೂಂಡಾಗಳು ಅಮಾಯಕರ ಮೇಲೆ ದಾಳಿ , ದೌರ್ಜನ್ಯ, ದರೋಡೆ ನಡೆಸುವ ಮೂಲಕ ರಾಜ್ಯದಲ್ಲಿ ಗೂಂಡಾರಾಜ್ಯ ನಿರ್ಮಾಣ ಮಾಡುತ್ತಿದೆ ಎಂದ ಅವರು ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದ ಹೆಸರಿನಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಸಾರ್ವಜನಿಕವಾಗಿ ಸಂಗ್ರಹಿಸಿದ ಕೋಟ್ಯಂತರ ರೂಪಾಯಿಗಳ ಹಣದ ಲೆಕ್ಕಾಚಾರ ಸಾರ್ವಜನಿಕರ ಮುಂದಿಡಲಿ ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮಾತನಾಡಿ ರಾಜ್ಯ ಸರ್ಕಾರ ರೈತ ವಿರೋಧಿ ಕಾನೂನನ್ನು ಜಾರಿಗೆ ತಂದಿದ್ದು , ಇದರ ವಿರುದ್ಧ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ದಾವೆ ಹೂಡುವುದಲ್ಲದೆ ,ರಾಜ್ಯದ ಪ್ರಗತಿಪರ ರೈತ, ಕಾರ್ಮಿಕ , ದಲಿತ ಸಂಘಟನೆಗಳೊಂದಿಗೆ ಸೇರಿ ಮತ್ತೊಂದು ಸ್ವಾತಂತ್ರ್ಯದ ರೀತಿಯಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ವಸಂತ ನಡ ,ಸಿಐಟಿಯು ನಾಯಕಿ ನ್ಯಾಯವಾದಿ ಸುಕನ್ಯಾ ಹೆಚ್ ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಮುಖಂಡರಾದ ಕುಸುಮ ಮಾಚಾರು, ಶಶಿಕಲಾ ಪಣಕಜೆ ಜನವಾದಿ ಮಹಿಳಾ ಸಂಘಟನೆಯ ಸುಧಾ ಕೆ ರಾವ್ , ಮಾಲಿನಿ ಕೈಕಂಬ , ಕರ್ನಾಟಕ ಪ್ರಾಂತ ರೈತ ಸಂಘದ ಮನೋಹರ ನಿಡ್ಲೆ , ಜಯನ್ ಮುಂಡಾಜೆ ಯುವಜನ ಸಂಘಟನೆಯ ಸುಜೀತ್ ಉಜಿರೆ , ವಿಧ್ಯಾರ್ಥಿ ಸಂಘಟನೆಯ ಸುಹಾಸ್ ಬೆಳ್ತಂಗಡಿ, ಸುದೀಪ್ ಬೆಳ್ತಂಗಡಿ ವಹಿಸಿದ್ದರು.