ಬೆಳ್ತಂಗಡಿ: ಕಳೆದ ವರ್ಷ ಸುರಿದ ಧಾರಾಕಾರ ಮಳೆಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ಮಿತ್ತಬಾಗಿಲು ಪ್ರದೇಶ ಗುಡ್ಡೆ ಕುಸಿದು ಮನೆಯೆಲ್ಲ ಜಲಾವೃತವಾಗಿ ಜನಜೀವನವೇ ನಲುಗಿ ಹೋಗಿತ್ತು. ಆದರೆ ಈ ಬೇಸಿಗೆಯಲ್ಲಿ ಮತ್ತೆ ನದಿ, ತೊರೆ, ಬಾವಿಗಳು ಬತ್ತುವ ಹಂತದಲ್ಲಿದೆ.
ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ಚಿಣ್ಣರ ತಂಡವೊಂದು, ಸುಮ್ಮನೆ ರಜೆಯನ್ನು ಟಿವಿ, ಮೊಬೈಲ್ ಎಂದು ಸಮಯ ವ್ಯರ್ಥ ಮಾಡದೆ 12 ಅಡಿ ಬಾವಿ ತೋಡಿದೆ. ಕೇಳಲು ಆಶ್ಚರ್ಯವೆನಿಸಿದರು ನಂಬಲೇ ಬೇಕು.
ಮಿತ್ತಬಾಗಿಲು ಗ್ರಾಮದ ಕುಕ್ಕಾವು ಕೊಪ್ಪದ ಗುಂಡಿ ಚಿದಾನಂದ ಎಂಬುವರ ಬಾವಿ ಬತ್ತಿತ್ತು. ತಕ್ಷಣ ಚಿದಾನಂದ ಅವರ ಮಗ ಮತ್ತು ತನ್ನ ಸಹಪಾಠಿಗಳು ಸೇರಿ ಬಾವಿ ಕೊರೆಯುವ ಸಹವಾಸಕ್ಕೆ ಮುಂದಾಗಿದ್ದರು. ಮನೆ ಮಂದಿ ಮಕ್ಕಳು ಆಟವಾಡುತ್ತಾರೆ ಎಂದು ಮನೆಮಂದಿಯೂ ಸುಮ್ಮನಿದ್ದರು. ಆದರೆ ನೋಡು ನೋಡುತ್ತಲೆ ಮಕ್ಕಳು ನಾಲ್ಕೇ ದಿನದಲ್ಲಿ 12 ಅಡಿ ಉದ್ದ, 4 ಅಡಿ ಅಗಲದ ಬಾವಿ ತೋಡಿದ್ದರು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿತ್ತಬಾಗಿಲು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕಾವು ಶಾಲೆಯಲ್ಲಿ ಕಲಿಯುತ್ತಿರುವ ಧನುಷ್ (9ನೇ ತರಗತಿ), ಸಹಪಾಠಿ ಪುಷ್ಪರಾಜ್ (9ನೇ), ಪ್ರಸನ್ನ (6 ನೇ), ಗುರುರಾಜ್ (6 ನೇ), ಶ್ರೇಯಸ್ (5 ನೇ), ಭವಿನೀಶ್ (4 ನೇ) ಸೇರಿ ತೋಟದಲ್ಲಿ ಬಾವಿ ತೆಗೆದಿದ್ದಾರೆ.