ಬೆಂಗಳೂರಿನಲ್ಲಿ ಆನ್‌ಲೈನ್ ಮೂಲಕ ಮಾರಾಟವಾಗುವ ತರಕಾರಿಗಳು ತಾಜಾವಾಗಿ ಕಾಣುವಂತೆ ಮಾಡಲು ಕೆಮಿಕಲ್ ಸ್ಪ್ರೇ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯು.ಟಿ. ಖಾದರ್ ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡ ಸೂಪರ್ ಮಾರ್ಕೆಟ್ ಹಾಗೂ ಮಾಲ್‌ಗಳಲ್ಲಿ ತರಕಾರಿಗಳು ಹೊಳೆಯುವಂತೆ ಮಾಡಲು ಬಣ್ಣ ಬಣ್ಣದ ದೀಪಗಳನ್ನು ಹಾಕಿ ಗ್ರಾಹಕರನ್ನು ಮರುಳುಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಇದೇ ವೇಳೆ, ಇತ್ತೀಚೆಗೆ ಹೋಟೆಲ್‌ಗಳ ಮೇಲಿನ ದಾಳಿ ಸಂದರ್ಭದಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಷನ್ ಹಾಗೂ ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರ ಜೊತೆ ಸಭೆ ನಡೆಸಲಾಗುವುದು ಎಂದರು.
ಆಹಾರ ಸುರಕ್ಷತೆ, ನೈರ್ಮಲ್ಯ ಹಾಗೂ ಸೂಕ್ತ ತರಬೇತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.


