ಚಿಕ್ಕಮಗಳೂರು; ಚೈತ್ರಾ ಕುಂದಾಪುರ ಬಿಜೆಪಿ ಟಿಕೆಟ್ ವಂಚನೆ ಗ್ಯಾಂಗ್ ನ ಪ್ರಮುಖ ಆರೋಪಿ ಮೇಲೆ ಮತ್ತೊಂದು ದೂರು ದಾಖಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಧನರಾಜ್ ವಿರುದ್ದ ಸಲೂನ್ ಮಾಲೀಕನ ಹಲ್ಲೆ ಆರೋಪ ಕೇಳಿ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಏಕೆ ಹೇಳಿಕೆ ನೀಡಿದೆ ಎಂದು ಧನರಾಜ್ ಸಲೂನ್ ಮಾಲೀಕ ರಾಮು ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಚಿಕ್ಕಮಗಳೂರಿನ ಕಡೂರಿನಲ್ಲಿ ರಾಮು ಸಲೂನ್ ನಡೆಸುತ್ತಿದ್ದಾರೆ.ಇದೇ ಸಲೂನ್ ನಲ್ಲಿ ಕಬಾಬ್ ವ್ಯಾಪಾರಿಯನ್ನ ಆರ್.ಎಸ್.ಎಸ್. ನಾಯಕನನ್ನಾಗಿ ತಯಾರಿ ಮಾಡಲಾಗಿತ್ತು. ಕಬಾಬ್ ವ್ಯಾಪಾರಿ ಚಿನ್ನಾ ನಾಯ್ಕ್ ಗೆ ಗೋಪಾಲ್ ಜೀ ಎಂದು ಪಾತ್ರ ಸೃಷ್ಟಿಸಿ ಮೇಕಪ್ ಮಾಡಿಸಿದ್ದನು.
ಸಲೂನ್ ಮಾಲೀಕ ರಾಮು ವಂಚನೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು, ಕಳೆದ ತಿಂಗಳು ಜೈಲಿನಿಂದ ಹೊರಬಂದಿರುವ ಧನರಾಜ್ ಗೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.ಸೋಮವಾರ ಕಡೂರಿನ ಹೋಟೆಲ್ ನಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆ ಸಂಬಂಧ ಬೀರೂರು ಪೊಲೀಸರಿಗೆ ರಾಮು ದೂರು ನೀಡಿದ್ದಾರೆ.ಈ ಬಗ್ಗೆ ಹಲ್ಲೆಗೊಳಗಾದ ರಾಮು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ಬೀರೂರು ಪೊಲೀಸರು ಪ್ರಕರಣ ದಾಖಲಿಸದ ಹಿನ್ನೆಲೆ ಚಿಕ್ಕಮಗಳೂರು ಎಸ್ಪಿಗೆ ಸಲೂನ್ ಮಾಲೀಕ ರಾಮು ದೂರು ನೀಡಿದ್ದಾರೆ.


