ನವದೆಹಲಿ: ಮಂಗಳೂರು ಸೇರಿದಂತೆ ಕರ್ನಾಟಕದ ಒಂಬತ್ತು ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಒಲವು ವ್ಯಕ್ತಪಡಿಸಿದೆ.
ಮಂಡ್ಯ, ಮೈಸೂರು, ಚಾಮರಾಜನಗರ, ಕೋಲಾರ, ಹಾಸನ, ಮಂಗಳೂರು, ಹುಬ್ಬಳ್ಳಿ-ಧಾರವಾಡ, ರಾಯಚೂರು, ಬೀದರ್ ಜಿಲ್ಲೆಗಳನ್ನು ಒಳಗೊಂಡ ಯೋಜನೆ ಕುರಿತಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಸಚಿವ ಪಿಯೂಶ್ ಗೋಯೆಲ್ ಅವರೊಂದಿಗೆ ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೆಲವು ದಿನಗಳ ಹಿಂದೆ ಮಾತುಕತೆ ನಡೆಸಿದ್ದರು.
ಇದೀಗ ಪಿಯೂಶ್ ಗೋಯೆಲ್ ಜತೆ ಹೆಚ್.ಡಿ. ಕುಮಾರಸ್ವಾಮಿ ನಡೆಸಿದ್ದ ಚರ್ಚೆಗೆ ಮಹತ್ವದ ಮುನ್ನಡೆ ಲಭಿಸಿದ್ದು, ಯೋಜನೆ ಅನುಷ್ಠಾನಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪಿಯೂಶ್ ಗೋಯೆಲ್ ಪತ್ರ ಬರೆದಿದ್ದಾರೆ.
ಕರ್ನಾಟಕದ ಕೈಗಾರಿಕೆ ಹಾಗೂ ಸಾಗಣೆ ಕ್ಷೇತ್ರಗಳಿಗೆ ಪರಿವರ್ತನಾತ್ಮಕ ಕಾಯಕಲ್ಪ ನೀಡುವ ಸಲುವಾಗಿ ಒಂಬತ್ತು ಜಿಲ್ಲೆಗಳಲ್ಲಿ ಒಂಬತ್ತು ಕೈಗಾರಿಕಾ ಪಾರ್ಕ್ ಸ್ಥಾಪಿಸುವ ಯೋಜನೆ ಇದಾಗಿದ್ದು, ಈ ಯೋಜನೆ ಅನುಷ್ಠಾನಕ್ಕೆ ಬಂದರೆ ಕರ್ನಾಟಕದಲ್ಲಿ ಸರಕು, ಕೈಗಾರಿಕೆ ಉತ್ಪನ್ನಗಳ ಸಾಗಣೆ ಸುಲಭವಾಗಿ ಕೈಗಾರಿಕಾಭಿವೃದ್ಧಿ ವೇಗ ಗತಿಯಲ್ಲಿ ಸಾಗಲಿದೆ.
ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲಿ ಸಾಗಣೆ ಮತ್ತು ಉತ್ಪಾದನೆಯಿಂದ ಮೊದಲ್ಗೊಂಡು ರಾಯಚೂರಿನಲ್ಲಿ ಕೃಷಿ ಸಂಸ್ಕರಣೆ, ಮೈಸೂರು ಮತ್ತು ಕೋಲಾರದಲ್ಲಿ ಮೌಲ್ಯವರ್ಧಿತ ವಲಯಗಳ ವಿಸ್ತರಣೆವರೆಗೆ ವಿಶೇಷ ಕೈಗಾರಿಕಾ ಸಮೂಹಗಳನ್ನು ಪ್ರಸ್ತಾವಿತ ಯೋಜನೆ ಉತ್ತೇಜಿಸಲಿದೆ.


