ಮಂಡ್ಯ: ಕಾಶಿಯ ಗಂಗಾರತಿ ಮಾದರಿಯಲ್ಲೇ ಕೆಆರ್ ಎಸ್ ಜಲಾಶಯದಲ್ಲಿ ಕಾವೇರಿ ಆರತಿಗೆ ಇಂದು ಚಾಲನೆ ನೀಡಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಸಂಜೆ ಕಾವೇರಿ ಆರತಿಗೆ ಚಾಲನೆ ನೀಡಿದರು.
ದಕ್ಷಿಣ ಭಾರತದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಕಾವೇರಿ ಆರತಿಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು. ಸೆ.26ರಿಂದ ಅಕ್ಟೋಬರ್ 2ರವರೆಗೆ ಪ್ರತಿ ಸಂಜೆ ಕಾವೇರಿ ಆರತಿ ನಡೆಯಲಿದೆ.
13 ವೈದಿಕರ ತಂಡ ಸೇರಿ ಒಟ್ಟು 40 ಜನರ ತಂಡ ಪೂಜೆಯಲ್ಲಿ ಭಾಗಿದ್ದರು. ವಾತಾಪಿ ಗಣಪತಿಂ ಭಜೆ ಮಂಗಳವಾದ್ಯದಿಂದ ಪೂಜೆ ಪ್ರಾರಂಭವಾಗಿ ಕಾವೇರಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ಸಂಕಲ್ಪ ಮಾಡಲಾಯಿತು. ಕಾವೇರಿ ಸ್ತೋತ್ರದ ಮೂಲಕ ತೀರ್ಥ ಪೂಜೆ ಮಾಡಿ ಬಾಗಿನ ಅರ್ಪಣೆ ಮಾಡಲಾಯಿತು.
ಬ್ರಹ್ಮ, ವಿಷ್ಣು, ಮಹೇಶ್ವರರ ಪ್ರಾರ್ಥನೆ, ಚಾಮರ ಸೇವೆಯೊಂದಿಗೆ ಮೂರು ದಿಕ್ಕಿಗೂ ಶಂಖನಾದ, ಧೂಪದ ಆರತಿ ಹಾಗೂ ಮಂತ್ರ ಪುಷ್ಪ ಪಠಣ ಮಾಡಲಾಯಿತು. ಕೊನೆಯಲ್ಲಿ ಕುಂಭಾರತಿ, ನಾಗಾರತಿ, ಕಾವೇರಿ ಆರತಿಯೊಂದಿಗೆ ಪೂಜಾ ಕೈಂಕರ್ಯ ಸಂಪನ್ನಗೊಂಡಿತು.
ಕಾವೇರಿ ಆರತಿಯ ವರ್ಣರಂಜಿತ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ರಾಜ್ಯ ಸರ್ಕಾರವು ಪ್ರವಾಸಿಗರಿಗಾಗಿ ಕೆಆರ್ ಎಸ್ ಅಣೆಕಟ್ಟಿನಲ್ಲಿ ಕ್ರೀಡಾ ಉತ್ಸವಗಳನ್ನು ಆಯೋಜಿಸುತ್ತಿದೆ.ರಾಜ್ಯ ಸರ್ಕಾರ ಈ ವರ್ಷ ಪ್ರಾಯೋಗಿಕವಾಗಿ ಕಾವೇರಿ ಆರತಿ ಕಾರ್ಯಕ್ರಮವನ್ನು ಮಾಡುತ್ತಿದೆಯಾದರೂ ಪ್ರವಾಸಿಗರ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ವರ್ಣರಂಜಿತವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.


