
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ಸಾರ್ವಜನಿಕವಾಗಿ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ (DMK) ಶಾಸಕ ಹಾಗೂ ಮಾಜಿ ಸಚಿವ ಅನಿತಾ ರಾಧಾಕೃಷ್ಣನ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜೂನ್ 20ರಂದು ತೂತುಕ್ಕುಡಿ ಜಿಲ್ಲೆಯ ಆಥೂರ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅನಿತಾ ರಾಧಾಕೃಷ್ಣನ್, ಇತ್ತೀಚೆಗೆ ವಿಧಾನಸಭೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತ ಚರ್ಚೆಯ ವೇಳೆ ಸಿಎಂ ವಿಜಯ್ ಮತ್ತು ಡಿಎಂಕೆ ಶಾಸಕ ಎಸ್. ಆಸ್ಟಿನ್ ನಡುವೆ ನಡೆದಿದ್ದ ವಾಗ್ವಾದವನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ್ದರು.
“ಆಸ್ಟಿನ್ ಅವರು ಸಿಎಂಗೆ ‘ನೀವು ಬಾಯಿ ತೆರೆದು ಮಾತನಾಡುವುದಿಲ್ಲವೇ?’ ಎಂದು ಪ್ರಶ್ನಿಸಿದಾಗ, ವಿಜಯ್ ಅವರು ‘ನಟಿಯೊಂದಿಗೆ ಮನೆಯಲ್ಲಿ ಎಷ್ಟು ಸಂತೋಷವಾಗಿದ್ದೆ, ಈಗ ಇಲ್ಲಿ ಹೇಗೆ ಸಿಲುಕಿಕೊಂಡೆ’ ಎಂದು ಯೋಚಿಸುವ ಸಿಕ್ಕಿಬಿದ್ದ ವ್ಯಕ್ತಿಯಂತೆ ಕಾಣುತ್ತಿದ್ದರು” ಎಂದು ವಿಜಯ್ ಅವರ ಸಿನಿಮೀಯ ಹಿನ್ನೆಲೆ ಹಾಗೂ ವೈಯಕ್ತಿಕ ಜೀವನವನ್ನು ಗುರಿಯಾಗಿಸಿ ಟೀಕಿಸಿದ್ದರು.
ಮುಖ್ಯಮಂತ್ರಿಯವರ ರಾಜಕೀಯ ನಡವಳಿಕೆಯನ್ನು ಅಪಹಾಸ್ಯ ಮಾಡಿದ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಸಲ್ಲಿಕೆಯಾದ ದೂರಿನ ಆಧಾರದ ಮೇಲೆ ಆಥೂರ್ ಪೊಲೀಸರು ಶಾಸಕ ಅನಿತಾ ರಾಧಾಕೃಷ್ಣನ್ ವಿರುದ್ಧ ಎರಡು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.


