ಬ್ರಹ್ಮಾವರ: ಬಿಜೆಪಿ ಮುಖಂಡರಿಂದಲೇ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮುದ್ದೂರಿನಲ್ಲಿ ನಡೆದಿದೆ.
ನೆಂಚಾರು ನಿವಾಸಿಯಾಗಿರುವ ಪ್ರಭಾಕರ ಪೂಜಾರಿ (51) ಹಲ್ಲೆಗೆ ಒಳಗಾದ ಬಿಜೆಪಿ ಕಾರ್ಯಕರ್ತರಾಗಿದ್ದು, ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರಾದ ಪ್ರತಾಪ್ ಹೆಗ್ಡೆ, ಹರೀಶ್, ದಿನೇಶ್ ಮತ್ತು ಗಣೇಶ್ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ.
ನಿನ್ನೆ ಮುಂಜಾನೆ ನೆಂಚಾರು ಹಾಲು ಡೈರಿಗೆ ಹಾಲು ನೀಡಲು ಬಂದಿದ್ದ ಪ್ರಭಾಕರ ಪೂಜಾರಿ ಅವರನ್ನು ಅಪಹರಿಸಿದ್ದ ತಂಡ, ನಂತರ ಪ್ರತಾಪ್ ಹೆಗ್ಡೆ ಕಚೇರಿಯಲ್ಲಿ ವಿದ್ಯುತ್ ತಂತಿಯಿಂದ ಮಾರಣಾಂತಿಕ ಹಲ್ಲೆ ಮಾಡಿ ಸಂಜೆಯವರೆಗೂ ಕಚೇರಿಯಲ್ಲಿ ಕೂಡಿಹಾಕಿದ್ದರು ಎನ್ನಲಾಗಿದೆ.
ಗಂಭೀರವಾಗಿ ಹಲ್ಲೆಗೊಳಗಾಗಿದ್ದ ಪ್ರಭಾಕರ ಪೂಜಾರಿಯವರನ್ನು ಪತ್ನಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಹಲ್ಲೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಭಾಕರ ಪೂಜಾರಿ ಪ್ರಕರಣ ದಾಖಲಿಸಿದ್ದಾರೆ.