ನವದೆಹಲಿ: ಕಾಂಗ್ರೆಸ್ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯ ವೇಳೆ ವಾಷಿಂಗ್ ಮಷಿನ್ ಅನ್ನು ಸಾಂಕೇತಿಕವಾಗಿ ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷವು, ‘ಇದು ಬಿಜೆಪಿಯ ವಾಷಿಂಗ್ ಮಷಿನ್, ಸಂಪೂರ್ಣ ಸ್ವಯಂಚಾಲಿತ’ ಎಂದು ಬಿಜೆಪಿಯ ಕಾಲೆಳೆದಿದೆ.
ಸುದ್ದಿಗೋಷ್ಠಿಯಲ್ಲಿ ಮೊದಲಿಗೆ ‘ಬಿಜೆಪಿ ವಾಷಿಂಗ್ ಮಷಿನ್’ ಎಂದು ಬರೆದಿರುವ ಮಷಿನ್ ಅನ್ನು ಮೇಜಿನ ಮೇಲೆ ಇಡಲಾಯಿತು. ನಂತರ ಅದರೊಳಗೆ ‘ಭ್ರಷ್ಟಾಚಾರ, ವಂಚನೆ, ಹಗರಣ’ ಎಂದು ಬರೆದಿರುವ ಕೊಳಕಾದ ಟಿ–ಶರ್ಟ್ ಅನ್ನು ಹಾಕಲಾಯಿತು. ಸ್ವಲ್ಪ ಸಮಯದ ನಂತರ ‘ಬಿಜೆಪಿ ಮೋದಿ ವಾಶ್’ ಎಂದು ಬರೆದಿರುವ ಬಿಳುಪಾದ ಟೀ–ಶರ್ಟ್‌ವೊಂದು ಹೊರಗೆ ಬಂದಿತು.
ಸಾಂಕೇತಿಕ ಪ್ರದರ್ಶನದ ನಂತರ ಮಾತನಾಡಿದ ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಬಿಜೆಪಿ ವಾಷಿಂಗ್ ಮಷಿನ್‌ನ ಬೆಲೆ ಸುಮಾರು ₹8,500 ಕೋಟಿ. ‘ಮೋದಿ ವಾಷಿಂಗ್ ಪೌಡರ್’ ಬಳಸಿದರೆ ಎಲ್ಲಾ ರೀತಿಯ ಭ್ರಷ್ಟಾಚಾರದ ಕಲೆಗಳನ್ನು ಈ ಯಂತ್ರ ಶುಚಿಗೊಳಿಸುತ್ತದೆ ಎಂದರು.
‘ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ನಾರಾಯಣ ರಾಣೆ, ಅಜಿತ್ ಪವಾರ್, ಛಗನ್ ಭುಜಬಲ್ ಮತ್ತು ಅಶೋಕ್ ಚವಾಣ್ ಅವರ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪ ಮಾಡಿತ್ತು. ಆದರೆ ಅವರು ಬಿಜೆಪಿ ಸೇರಿದ ನಂತರ ಆ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿತು’ ಎಂದು ಕಿಡಿಕಾರಿದರು.
ಎನ್‌ಸಿಪಿ(ಶಿಂದೆ ಬಣ) ನಾಯಕ ಪ್ರಫುಲ್ ಪಟೇಲ್ ವಿರುದ್ಧ 2017ರ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅಂತಿಮ ವರದಿ ಸಲ್ಲಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸೇರಿದರೆ ಎಲ್ಲ ಪ್ರಕರಣಗಳು ಕ್ಲೋಸ್ ಎಂದರು.
‘ನಾ ಖಾವುಂಗಾ, ನಾ ಖಾನೆ ದೂಂಗಾ, ಅಗರ್ ಬಿಜೆಪಿ ಜಾಯಿನ್ ಕರೋ, ತೊ ಕೇಸಸ್ ರಫಾ-ದಫಾ ಕರ್ ದೂಂಗಾ’ (ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ. ಬಿಜೆಪಿ ಸೇರಿದರೆ ಪ್ರಕರಣಗಳನ್ನು ಮುಚ್ಚಿಹಾಕುತ್ತೇನೆ) ಎಂದು ಮೋದಿ ಅವರ 2014ರ ಭಾಷಣದ ಡೈಲಾಗ್ ಹೇಳಿ ಲೇವಡಿ ಮಾಡಿದರು.
ಸುದ್ದಿಗೋಷ್ಠಿಗೆ ಬಂದವರಿಗೆ ‘ಮೋದಿ ವಾಷಿಂಗ್ ಪೌಡರ್’ ಅನ್ನು ವಿತರಿಸಿದರು.