ಮಂಗಳೂರು, ಮೇ 4: ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ದ.ಕ. ಜಿಲ್ಲಾಡಳಿತದಿಂದ ಆಹಾರ ಕಿಟ್ ವಿತರಣೆಗೆ ಸಂಬಂಧಿಸಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಗುಮಾನಿ ಇದೆ. ಇದರಲ್ಲಿ ಜಿಲ್ಲಾಡಳಿತ, ಮಂಗಳೂರು ಸಂಸದ, ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರು ಶಾಮೀಲಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಸಂವಹನಕಾರ ಹಾಗೂ ದ.ಕ. ಜಿಲ್ಲಾ ಕಾಂಗ್ರೆಸ್ ಮಾಧ್ಯಮ ವಕ್ತಾರ ಎ.ಸಿ. ವಿನಯರಾಜ್ ದೂರಿದ್ದಾರೆ.
ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ದಕ್ಷಿಣ ಕನ್ನಡ ಜಿಲ್ಲಾಡಳಿತವು ರೇಷನ್ ಕಿಟ್‌ಗಳನ್ನು ಕೆಲವು ಆಯ್ದ ಕಡೆಗಳಲ್ಲಿ ವಿತರಿಸುವುದಕ್ಕಾಗಿ ತಯಾರು ಮಾಡಲು ಮಂಗಳೂರಿನ ಒಂದು ಏಜೆನ್ಸಿಗೆ ನೀಡಿತ್ತು. ಆದರೆ ಪಾರದರ್ಶಕತೆಯನ್ನು ಪಾಲಿಸಿಲ್ಲ. ಆಹಾರ ಕಿಟ್ಟನ್ನು ತಯಾರಿಸಲು ಟೆಂಡರ್ ಕರೆಯದೆ ನೀಡಲಾಗಿದ್ದು, ಇದರಲ್ಲಿ ಜಿಲ್ಲಾಡಳಿತ, ಮಂಗಳೂರು ಸಂಸದರು ಹಾಗು ಮಂಗಳೂರು ದಕ್ಷಿಣ ಮತ್ತು ಉತ್ತರ ಶಾಸಕರ ಶಾಮೀಲಾಗಿದ್ದಾರೆ ಎಂಬ ಆರೋಪವಿದೆ. ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿದೆ ಎಂಬ ಗುಮಾನಿಯಿದೆ. ಅಲ್ಲದೆ ಮಂಗಳೂರು ದಕ್ಷಿಣ ಹಾಗೂ ಉತ್ತರ ವಿಧಾನಸಭಾ ಶಾಸಕರು ಅವರ ಹೆಸರಿನಲ್ಲಿ ಆಹಾರದ ಕಿಟ್ಟನ್ನು ಮಾಡಿ ಅವರ ಲೇಬಲ್ ಹಾಕಿ ವಿತರಿಸಿದ್ದು, ಇದಕ್ಕೆ ಸರಕಾರದ ಹಣ ದುರುಪಯೋಗಪಡಿಸಲಾಗಿದೆ ಎಂಬ ಆರೋಪವಿದೆ.
ಜಿಲ್ಲಾಡಳಿತಕ್ಕೆ ಆಹಾರದ ಕಿಟ್ಟನ್ನು ಮಾಡಿದ ಅದೇ ಏಜನ್ಸಿ ಸಂಸದರಿಗೆ ಹಾಗೂ ಶಾಸಕರಿಗೆ ಆಹಾರದ ಕಿಟ್ಟನ್ನು ತಯಾರಿಸಿದೆ. ಎಲ್ಲ ಕಿಟ್‌ಗಳು ಮನಪಾ ಕಟ್ಟಡದ ಮುಂಭಾಗದಲ್ಲಿರುವ ಕಟ್ಟಡದಲ್ಲಿ ತಯಾರಿಸಲಾಗಿದೆ ಹಾಗೂ ಮನಪಾ ಸದಸ್ಯರು ಸೇರಿದಂತೆ ಎಲ್ಲರಿಗೂ ಅಲ್ಲಿಂದಲೇ ಹಂಚಲಾಗಿತ್ತು. ಜಿಲ್ಲಾಡಳಿತ ಆಹಾರ ಸಾಮಗ್ರಿ ಖರೀದಿಸುವಾಗ ಕೆಪಿಟಿಟಿ ನಿಯಮವನ್ನು ಉಲ್ಲಂಘಿಸಲಾಗಿದೆ. ಉಸ್ತುವಾರಿ ಸಚಿವರು ನಡೆ ಕೂಡ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಆದುದರಿಂದ ಇದನ್ನು ಲೋಕಾಯುಕ್ತರಿಂದ ತನಿಖೆ ಮಾಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೊರೋನ ನಿಯಂತ್ರಣದಲ್ಲಿ ಜಿಲ್ಲಾಡಳಿತ ಕೊರೋನ ನಿಯಂತ್ರಿಸುವಲ್ಲಿ ಹಾಗೂ ಇದು ವ್ಯಾಪಕವಾಗಿ ಹರಡುತ್ತಿರುವುದಕ್ಕೆ ಕಾರಣವನ್ನು ಕಂಡುಹುಡುಕುವಲ್ಲಿ ದ.ಕ. ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ದ.ಕ. ಜಿಲ್ಲಾಧಿಕಾರಿಯನ್ನು ಸ್ವತಂತ್ರವಾಗಿ ಕೆಲಸ ಮಾಡಲು ಇಲ್ಲಿಯ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಬಿಡದ ಕಾರಣದಿಂದ ನಮ್ಮ ಜಿಲ್ಲೆ ಇನ್ನೂ ಕೂಡ ಕೊರೋನಮುಕ್ತವಾಗಿಲ್ಲ ಹಾಗೂ ಲಾಕ್ ಡೌನ್ ಸಂದರ್ಭದಲ್ಲೇ ಕೊರೋನ ಪ್ರಕರಣ ಹೆಚ್ಚಾಗಿದೆ ಎಂದು ವಿನರಾಜ್ ಆರೋಪಿಸಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಈಗಲೂ 9 ಮಂದಿ ಕೊರೊನ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದರೂ ಜಿಲ್ಲೆ ಆರೆಂಜ್ ವಲಯದಲ್ಲಿದ್ದರೂ ಕೊರೋನಮುಕ್ತ ಅಲ್ಲದಿದ್ದರೂ, ಜಿಲ್ಲಾಡಳಿತ ಮೇ 4ರಿಂದ ಜಿಲ್ಲಾದ್ಯಂತ ಲಾಕ್ ಡೌನ್ ನಿಯಮ ಸಡಿಲಿಸಿದೆ. ಬೆಳಗ್ಗೆ 7ರಿಂದ ಸಂಜೆ 7ರವರೆಗೆ ವಾಹನ ಓಡಾಟ ಹಾಗೂ ಇತರ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಿದೆ. ಜಿಲ್ಲೆಯಿಂದ ಎಲ್ಲ ಹೊರಜಿಲ್ಲೆ, ರಾಜ್ಯಗಳ ಕಾರ್ಮಿಕರನ್ನು ಈಗಾಗಲೇ ಅವರವರ ಊರಿಗೆ ಕಳುಹಿಸಿಕೊಡಲಾಗುತ್ತಿದೆ. ಇವರಲ್ಲಿ ಹೆಚ್ಚಿನವರು ಕಟ್ಟಡ ಹಾಗೂ ಹೋಟೆಲ್ ಕಾರ್ಮಿಕರಾಗಿದ್ದಾರೆ. ಅವರು ಹೋದರೆ ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿಗೆ ಹಾಗು ಹೋಟೆಲ್‌ಗಳಲ್ಲಿ ಕಾರ್ಮಿಕರ ಕೊರತೆ ಕಂಡುಬಂದು ಕಾಮಗಾರಿ ಹಾಗೂ ಹೋಟೆಲ್ ವ್ಯವಹಾರ ಕುಂಠಿತವಾಗುತ್ತದೆ.
ಸಲೂನ್, ಬಾರ್ ರೆಸ್ಟೋರೆಂಟುಗಳು, ಹೋಟೆಲುಗಳು, ಸಿನಿಮಾ ಹಾಲ್, ಮಾಲುಗಳು, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸ್ವಿಮ್ಮಿಂಗ್ ಪೂಲ್, ಪಾರ್ಕ್, ಬಟ್ಟೆ ಅಂಗಡಿ, ವಾಣಿಜ್ಯ ಸಂಕೀರ್ಣ ಎಸೆನ್ಸಿಯಲ್ ಸರ್ವಿಸ್ ಅಂಗಡಿ ಹೊರತುಪಡಿಸಿ ವ್ಯಾಪಾರ ವಹಿವಾಟುಗಳು, ಜನಸಂದಣಿ ಆಗುವ ವ್ಯಾಪಾರ ಕೇಂದ್ರಗಳು, ಯಾವುದೂ ತೆರೆಯುವ ಹಾಗಿಲ್ಲ. ಬಸ್ ಸಂಚಾರ ಇಲ್ಲ. ಹೀಗಿರುವಾಗ ೆ ಜಿಲ್ಲಾಡಳಿತ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಸಡಿಲಿಕೆ ಮಾಡಿರುವುದು ಯಾತಕ್ಕಾಗಿ ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಕದ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿದ್ದರೂ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ನಮ್ಮ ಉಸ್ತುವಾರಿ ಸಚಿವರು ಅದೇ ಜಿಲ್ಲೆಯವರಾಗಿದ್ದು, ಅವರಿಗೆ ಇದು ಗೊತ್ತಾಗಲಿಲ್ಲವೇ? ಎಂದು ಎ.ಸಿ.ವಿನಯ ರಾಜ್ ಪ್ರಶ್ನಿಸಿದ್ದಾರೆ. ಕೊರೋನವನ್ನು ಎದುರಿಸಲು ಲಾಕ್ ಡೌನ್ ಮಾಡಲಾಯಿತು. ಜನ ಅದಕ್ಕೆ ಸ್ಪಂದಿಸಿದರು. ಚಪ್ಪಾಳೆ, ಜಾಗಟೆ ಬಾರಿಸಿದರು, ದೀಪ ಹಚ್ಚಿದರು. ಸರಕಾರ ನೀಡಿದ ಆದೇಶದಂತೆ ಜನ ಮನೆಯ ಒಳಗೆಯೇ ಕಳೆದರು. ಆರ್ಥಿಕವಾಗಿ ಜನ ತೊಂದರೆಗೆ ಬಿದ್ದರು ಎಂದವರು ಹೇಳಿಕೆಯಲ್ಲಿ ಟೀಕಿಸಿದ್ದಾರೆ.