ಪಟ್ನಾ: ಹಾವಿಗೆ ರಾಖಿ ಕಟ್ಟಲು ಹೋಗಿ ಹಾವಿನಿಂದಲೇ ಪ್ರಾಣ ಕಳೆದುಕೊಂಡಿರುವ ಘಟನೆ ಬಿಹಾರದ ಸಾರಣ ಜಿಲ್ಲೆಯಲ್ಲಿ ನಡೆದಿದೆ.
25 ವರ್ಷದ ಮನಮೋಹನ್ ಉರ್ಫ್ ಬವುರಾ ಮೃತ ದುರ್ದೈವಿ.ವಿಷಕಾರಿ ಹಾವುಗಳನ್ನೂ ಹಿಡಿಯುವುದರಲ್ಲಿ ಪಳಗಿದ್ದ ಈತ ತನ್ನ ಸಹೋದರಿಯರಿಂದ ಹಾವಿಗೆ ರಾಖಿ ಕಟ್ಟಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಕಳೆದ 10 ವರ್ಷಗಳಿಂದ ಈತ ಹಾವುಗಳ ರಕ್ಷಣೆಯಲ್ಲಿ ತೊಡಗಿಕೊಂಡಿದ್ದು,ರಕ್ಷಾ ಬಂಧನವಾಗಿದ್ದ ಭಾನುವಾರದಂದು ಎರಡು ನಾಗರಹಾವುಗಳನ್ನೂ ಹಿಡಿದು ಸೋದರಿಯರಿಂದ ರಾಖಿ ಕಟ್ಟಿಸಲು ಮುಂದಾದಾಗ ಒಂದು ಹಾವು ಮನಮೋಹನ್ ಕಾಲಿನ ಹೆಬ್ಬೆರಳನ್ನು ಕಚ್ಚಿದೆ.
ಕೂಡಲೇ ಯವಕನಿಗೆ ಸ್ಥಳೀಯರು ಗಿಡಮೂಲಿಕೆ ಔಷಧಿ ಕೊಟ್ಟಿದ್ದಾರೆ. ಆದರೆ ಆರೋಗ್ಯ ಏರುಪೇರಾದ ಕಾರಣ, ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಹಾವು ಕಚ್ಚಿದರೆ ಅಗತ್ಯವಾಗಿ ಬೇಕಿದ್ದ ಆಂಟಿವಿನೋಮ್ ಇಂಜೆಕ್ಷನ್ ಅಲ್ಲಿ ಇರದಿದ್ದರಿಂದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು,ಅಷ್ಟರಲ್ಲೇ ಯುವಕ ಪ್ರಾಣ ಬಿಟ್ಟಿದ್ದಾನೆ.
ಸ್ನೇಕ್ ಬವುರಾ ಎಂದೇ ಪ್ರಸಿದ್ಧ ಪಡೆದಿದ್ದ ಯುವಕ ಮನಮೋಹನ್ ಸ್ಥಳೀಯವಾಗಿ ಸುತ್ತಮುತ್ತದ ಗ್ರಾಮಗಳಲ್ಲಿ ಎಲ್ಲೇ ಹಾವು ಕಾಣಿಸಿಕೊಂಡರೂ ಈತನಿಗೇ ಕರೆ ಮಾಡಲಾಗುತ್ತಿತ್ತು. ಗ್ರಾಮಸ್ಥರಿಗೆ ಹಾವುಗಳನ್ನು ಕೊಲ್ಲದಂತೆ ಜಾಗೃತಿ ಸಹ ಮೂಡಿಸುತ್ತಿದ್ದ ಯುವಕ. ಆದರೆ ಅದೃಷ್ಟ ಕೆಟ್ಟಿತ್ತು. ಹಾವು ಕಚ್ಚಿದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಆತ ಬದುಕುತ್ತಿದ್ದ ಎಂದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ