
ಬೆಂಗಳೂರು: ಮೂರು ಬಾರಿ ಶಾಸಕರಾಗಿದ್ದರೂ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಯಶವಂತರಾಯ ಗೌಡ ಪಾಟೀಲ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬೆಲೆಯೇ ಇಲ್ಲದಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 2023ರ ಚುನಾವಣೆಗೂ ಮುನ್ನವೇ ತಮಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು ಎಂದ ಅವರು, “ಈಗ ನಾನು ಪಕ್ಷ ಬಿಟ್ಟು ಹೋಗುತ್ತಿಲ್ಲ, ಅವರೇ ನನ್ನನ್ನು ಕೈಬಿಟ್ಟಿದ್ದಾರೆ” ಎಂದು ಬೇಸರ ಹೊರಹಾಕಿದರು. ಕಳೆದ ಬಾರಿಯೇ ತಮಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವುದಾಗಿ ಹೇಳಿದ್ದರೂ ಅದನ್ನು ನಿರಾಕರಿಸಿದ್ದಾಗಿ ತಿಳಿಸಿದ ಶಾಸಕರು, ಸ್ವಾತಂತ್ರ್ಯ ಬಂದಾಗಿನಿಂದಲೂ ಇಂಡಿ ಕ್ಷೇತ್ರದ ಜನಪ್ರತಿನಿಧಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂದು ಅಳಲು ತೋಡಿಕೊಂಡರು.
ತಮ್ಮ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸಬೇಕು ಮತ್ತು ಯಾವುದೇ ಕಾರಣಕ್ಕೂ ಇದನ್ನು ವಾಪಸ್ ಪಡೆಯುವುದಿಲ್ಲ ಹಾಗೂ ಶಾಸಕನಾಗಿ ಮುಂದುವರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ ಎಂದು ಸಚಿವ ಎಂ.ಬಿ. ಪಾಟೀಲ್ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಇನ್ನೊಂದೆಡೆ, ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ನಾಯಕನಿಗೆ ಅನ್ಯಾಯವಾಗಿದೆ ಎಂದು ಆಕ್ರೋಶಗೊಂಡ ಯಶವಂತರಾಯ ಗೌಡ ಪಾಟೀಲ್ ಅವರ ಬೆಂಬಲಿಗರು, ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗಿ ಧರಣಿ ನಡೆಸಿದರು.


