ಬೆಂಗಳೂರು: ದಿನ ಹೋದಂತೆ ರಾಜ್ಯದಲ್ಲಿ ಕೊರೊನಾ ಸೋಂಕು ಪೀಡಿತರ ಪ್ರಕರಣಗಳು ಹೆಚ್ಚುತ್ತಿವೆ. ರೋಗಿಗಳನ್ನು ಹಾಗೂ ಶಂಕಿತರನ್ನು ನೋಡಿಕೊಳ್ಳಲು ರಾಜ್ಯದ ಸಾವಿರಾರು ವೈದ್ಯರು, ನರ್ಸ್‌ಗಳು ಹಗಲಿರುಳು ಶ್ರಮವಹಿಸುತ್ತಿದ್ದಾರೆ. ಆದರೆ, ಬಾಡಿಗೆ ಮನೆಯಲ್ಲಿ ಇರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಕೆಲ ಮನೆ ಮಾಲೀಕರು ಕೊರೊನಾಕ್ಕೆ ಆತಂಕಗೊಂಡು ಮನೆ ತೆರವು ಮಾಡಲು ಒತ್ತಾಯಿಸುತ್ತಿರುವ ಪ್ರಕರಣಗಳು ಕೇಳಿ ಬಂದಿವೆ.
ಇದಕ್ಕೆ ಗರಂ ಆಗಿರುವ ಆರೋಗ್ಯ ಇಲಾಖೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಹೊರಡಿಸಿ, ರಾಜ್ಯದಲ್ಲಿ ಬಾಡಿಗೆ ಮನೆಯಲ್ಲಿ ಇರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ತೆರವುಗೊಳಿಸುವ ಮನೆ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ವೈದ್ಯರಿಗೆ ವೈದ್ಯಕೀಯ ಸಿಬ್ಬಂದಿಗೆ ಮನೆ ತೆರವು ಮಾಡಬೇಡಿ ಎಂದು ಹೇಳುವ ಹಾಗಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಮನೆ ಮಾಲೀಕರ ವೈದ್ಯಕೀಯ ಸಿಬ್ಬಂದಿಗಳನ್ನು ಮನೆಗೆ ಸೇರಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎಂದು ಕೆಲ ವರದಿಗಳು ಬಂದಿರುವ ಬೆನ್ನಲ್ಲಿ ಆರೋಗ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.