ಬೆಂಗಳೂರು: ಹೆಗಡೆ ನಗರ ಸಮೀಪ ಬರುವ ಸಾರಾಯಿಪಾಳ್ಯದ ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಆಶಾ ಕಾರ್ಯಕರ್ತೆ ಕೃಷ್ಣವೇಣಿ ಎಂಬವರ ಮೇಲೆ ಹಲ್ಲೆ ನಡೆದಿತ್ತು. ಈ ಬಗ್ಗೆ ದೂರು ದಾಖಲಾಗಿತ್ತು.
ಕಳೆದ 15 ದಿನಗಳಿಂದ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಹೆಲ್ತ್ ಸರ್ವೆ ಮಾಡುತ್ತಿದ್ದು, ಜನರಿಂದ ನೆಗಡಿ, ಜ್ವರ, ಕೆಮ್ಮು ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದ್ರೆ ಅವ್ರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ನಿನ್ನೆ ಆಶಾ ಕಾರ್ಯಕರ್ತೆಯರ ಮೇಲೆ ದಾಳಿ ನಡೆಸಲಾಗಿದೆ. ಆಶಾ ಕಾರ್ಯಕರ್ತೆ ಪಡೆದ ರಿಪೋರ್ಟ್ ಹರಿದು ಹಾಕಿದ್ದಾರೆ. ಫೋನ್ ಕಸಿದುಕೊಂಡು ಯಾರನ್ನು ಕರೆಯುತ್ತೀರೋ ಕರೀರಿ ಎಂದು ಅವಾಜ್ ಹಾಕಿದ್ದಾರೆ. ಅಲ್ಲದೆ ಇವರಿಗೆ ಯಾರು ಕೂಡ ಮಾಹಿತಿ, ಫೋನ್ ನಂಬರ್ ಕೂಡಬೇಡಿ ಅಂತ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಲಾಗಿದೆ.
ಘಟನೆ ನಡೆದ ತಕ್ಷಣ 100ಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಆಶಾ ಕಾರ್ಯಕರ್ತೆಯನ್ನು ರಕ್ಷಿಸಿದ್ದರು. ನಂತ್ರ ದೂರು ದಾಖಲಿಸಿಕೊಂಡಿದ್ದು, ಇಂದು ಮೂವರನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗ್ತಿದೆ.
ಸಾದಿಕ್ ಪಾಳ್ಯದಲ್ಲಿ ಆಶಾ ಕಾರ್ಯಕರ್ತೆಯ ವಿರುದ್ಧ ನಡೆದ ಘಟನೆಯನ್ನು ಖಂಡಿಸುತ್ತೇನೆ. ನಾನು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷನಾಗಿ ಅವರ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಅಲ್ಪ ಸಂಖ್ಯಾತ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ಹೇಳಿದ್ದಾರೆ.ಆಶಾ ಕಾರ್ಯಕರ್ತೆಯರು ಆರೋಗ್ಯದ ಮಾಹಿತಿ ಪಡೆಯಲು ಬಂದಿದ್ದರು. ಅವರಿಗೆ ಮಾಹಿತಿ ಕೊಡಬೇಕು. ಅದೇ ರೀತಿ ದೆಹಲಿಯ ನಿಜಾಮುದ್ದೀನ್ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸುದ್ದವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇದು ನಿಮ್ಮ ಕುಟುಂಬ ಹಾಗೂ ಬಂಧುಗಳಿಗೂ ಒಳ್ಳೆಯದು. ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.