ಬೆಳ್ತಂಗಡಿ : ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಎಸ್.ಟಿ.ಪಿ ನಿರ್ಮಾಣ ಮಾಡದೆ ತ್ಯಾಜ್ಯ ನೀರನ್ನು ಹಾರಿಯುವ ನೀರಿಗೆ ಬಿಡುತ್ತಿರುವ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಬೆಳ್ತಂಗಡಿ ಇಓ ಸೇರಿದಂತೆ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಇರುವ ಅಭ್ಯಾಸ್ ಪಿಯು ಕಾಲೇಜ್ ಗೆ ಜ.5 ರಂದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಬಾಹಿರವಾಗಿ ಕಟ್ಟಡಗಳನ್ನು ನಿರ್ಮಾಣ ಕಾರ್ಯವನ್ನು ನಿಲ್ಲಿಸುವಂತೆ. ಇನ್ನೂ ಮುಂದೆ ಕೆಲಸ ಮುಂದುವರಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕಾನೂನು ಪ್ರಕಾರ ದಾಖಲೆಗಳನ್ನು ಮಾಡಿಕೊಂಡು ಪಂಚಾಯತ್ ಅನುಮತಿ ಪಡೆದ ಬಳಿಕ ಕಟ್ಟಡ ನಿರ್ಮಾಣ ಮಾಡುವಂತೆ ಕಾಲೇಜಿನ ಮಾಲೀಕ ಕಾರ್ತಿಕೇಯ ಎಮ್.ಎಸ್ ಎಂಬವರಿಗೆ ಎಚ್ಚರಿಕೆ ನೀಡಲಾಗಿದೆ. ಈ ಎರಡು ಕಾಲೇಜ್ ನ ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರು ನೀಡಿದ ಪ್ರತಿಯ ಸ್ವವಿವರಗಳನ್ನು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಬಿತ್ತರಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡು ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.

ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಸರಕಾರದ ನಿಯಮಾವಳಿಗಳನ್ನು ಮೀರಿ ಕಟ್ಟಡಗಳನ್ನು ಕಾನೂನು ಬಾಹಿರವಾಗಿ ನಿರ್ಮಾಣ ಮಾಡಿಕೊಂಡು ಹಾಗೂ ಕೊಳಚೆ ನೀರು ಸಂಸ್ಕರಣ ಘಟಕ(STP) ನಿರ್ಮಾಣ ಮಾಡದೆ ತ್ಯಾಜ್ಯ ನೀರನ್ನು ಹಾರಿಯುವ ನೀರುಗಳಿಗೆ ಬಿಟ್ಟು ಕಾರ್ಯಾಚರಿಸುತ್ತಿರುವ ಲಾಯಿಲ ಗ್ರಾಮದ ಕಾಶಿಬೆಟ್ಟು ಬಳಿ ಇರುವ ಅಭ್ಯಾಸ್ ಪಿಯು ಕಾಲೇಜ್ ಮತ್ತು ಕುವೆಟ್ಟು ಗ್ರಾಮದ ಗುರುವಾಯನಕೆರೆಯಲ್ಲಿರುವ ವಿದ್ವತ್ ಪಿಯು ಕಾಲೇಜ್ ವಿರುದ್ಧ ಬೆಳ್ತಂಗಡಿ ಇಓ ಸೇರಿದಂತೆ ಇತರ ಅಧಿಕಾರಿಗಳಿಗೆ ಸ್ಥಳೀಯ ವ್ಯಕ್ತಿ ಜ.3 ರಂದು ದೂರು ನೀಡಿದ್ದರು.
ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಲಾಯಿಲ ಗ್ರಾಮ ಪಂಚಾಯತ್ ಪಿಡಿಓ ಶ್ರೀನಿವಾಸ್, ಪ್ರಭಾರ ಪಿಡಿಓ ತಾರಾನಾಥ್ ಹಾಗೂ ಇತರ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.


