ಬೆಳ್ತಂಗಡಿ : ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಹೋದ್ರೆ ಸಾಕು ಅಕ್ರಮಗಳ ವಾಸನೆಗಳು ಗಬ್ಬು ನಾರುತ್ತಿದೆ. ಈ ಅನಧಿಕೃತವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ನಿಲ್ಲಿಸಬೇಕಾದ ಅಧಿಕಾರಿ ವರ್ಗವೇ ಶಾಮೀಲಾಗಿರುವ ಶಂಕೆ ಹೆಚ್ಚಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಪರಿಹಾರ ಪಡೆದವರು ಗ್ರಾಮ ಪಂಚಾಯತ್ ನಿಂದ ದುರಸ್ತಿ ಮಾಡುವ ನೆಪದಲ್ಲಿ ಅನುಮತಿ ಪಡೆದು ಅನಧಿಕೃತವಾಗಿ ವಾಣಿಜ್ಯ ಕಟ್ಟಡ ಕಾಮಗಾರಿ ಹಾಗೂ ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ವಾಣಿಜ್ಯ ಕಟ್ಟಡ ಕಾಮಗಾರಿಯನ್ನು ರಾಜರೋಷವಾಗಿ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ರೂ ಅದಕ್ಕೆ ಕಟ್ಟಡ ಮಾಲೀಕರು ಕ್ಯಾರೆ ಮಾಡದೆ ಕೆಲಸಗಳನ್ನು ಮುಂದುವರಿಸಿಕೊಂಡಿದ್ದು ಇತ್ತ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡಿದ್ದಾರೆ.

ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಅಗಲೀಕರಣ ವೇಳೆ ಗುರುವಾಯನಕೆರೆ ಅಲಾದಿಕೊಟ್ಟಿಗೆ-ವಿದ್ಯಾನಗರದಲ್ಲಿ ಜಿ.ಮಹಮ್ಮದ್ ಎಂಬವರು 70 ಲಕ್ಷ ಪರಿಹಾರ ಪಡೆದುಕೊಂಡ ಬಳಿಕ ಅಕ್ರಮವಾಗಿ ವಾಣಿಜ್ಯ ಹೊಸ ಕಟ್ಟಡ ಕಾಮಗಾರಿ ನಡೆಸುತ್ತಿರುವುದು ಮತ್ತು ಗುರುವಾಯನಕೆರೆಯಲ್ಲಿ ಶೆಣೈ ರೆಸ್ಟೋರೆಂಟ್ ಮಾಲೀಕರಾದ ಪ್ರಕಾಶ್ ಶೆಣೈ ಅವರು ಯಾವುದೇ ದಾಖಲೆ ಇಲ್ಲದ ಜಾಗದಲ್ಲಿ ಅಕ್ರಮವಾಗಿ ಹೊಸ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಬಗ್ಗೆ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವನಿ ಶಂಕರ್ ಹಾಗೂ ಕುವೆಟ್ಟು ಗ್ರಾಮ ಪಂಚಾಯತ್ ಪಿಡಿಓ ಇಮ್ತಿಯಾಜ್ ಅವರಿಗೆ ದೂರು ನೀಡಿದಾಗ ಪಂಚಾಯತ್ ನಿಂದ ಮಾಲೀಕರಿಗೆ ನೋಟಿಸ್ ಮಾತ್ರ ಕೊಡುವ ಮೂಲಕ ಕಣ್ಣು ಮುಚ್ಚಿಕೊಂಡು ಅಕ್ರಮ ಕಾಮಗಾರಿ ಕೆಲಸಗಳನ್ನು ನಿಲ್ಲಿಸಲು ಮುಂದಾಗುತ್ತಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಈ ಅಧಿಕಾರಿಗಳು ಅಕ್ರಮ ತಡೆಯುವಲ್ಲಿ ವಿಫಲವಾಗಿರುವ ಕಾರಣದಿಂದ ಇವರ ವಿರುದ್ಧ ತನಿಖೆ ನಡೆಸಲು ಮಂಗಳೂರು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ.



