ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ 73ರ ಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿ ವರೆಗೆ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಸುವ ನೌಕರರಿಗೆ ಮೂರು ತಿಂಗಳ ವೇತನ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ನೌಕರರು ಆಕ್ರೋಶ ಹೊರಹಾಕಿ ಮುಷ್ಕರ ನಡೆಸುತ್ತಿರುವ ಘಟನೆ ಆ.5 ರಂದು ಸೋಮವಾರ ನಡೆದಿದೆ.

ಮಳೆಯಿಂದಾಗಿ ರಸ್ತೆ ತೀರ ಹದಗೆಟ್ಟಿದ್ದು ಮಳೆಗಾಲ ಆರಂಭದಿಂದ ಸವಾರರು ತೀರ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಮಧ್ಯೆ ರಸ್ತೆ ಸರಿಪಡಿಸಲು ನೌಕರರು ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದರೂ ಗುತ್ತಿಗೆದಾರ ಕಂಪೆನಿ ವೇತನ ನೀಡಿಲ್ಲ ಎಂದು ಓಡಿಲ್ನಾಳದಲ್ಲಿರುವ ಕಂಪೆನಿ ಯುನಿಟ್ ನಲ್ಲಿ ಮುಷ್ಕರ ನಿರತರಾಗಿದ್ದಾರೆ.

ಒಬ್ಬೊಬ್ಬರಿಗೆ 35 ರಿಂದ 60 ಸಾವಿರ ರೂ. ವರೆಗೆ ವೇತನಿವಿದ್ದು, ಒಬ್ಬರಿಗೂ ಈವರೆಗೆ ವೇತನ ಕೈಸೇರಿಲ್ಲ, ಹೆಂಡತಿ ಮಕ್ಕಳು ಆಹಾರವಿಲ್ಲದೆ ಸಂಕಷ್ಟದಲ್ಲಿದ್ದಾರೆ, ಊಟಕ್ಕೆ ಬೇಕಾದ ಆಹಾರ ಸಾಮಾಗ್ರಿಯಿಲ್ಲ, ಒತ್ತಡದಲ್ಲಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರಕಾರ, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಮ್ಮ ಕುಟುಂಬವನ್ನು ಬದುಕಿಸಿ, ಊರಿಗೆ ಹೋಗದೆ ತಿಂಗಳುಗಳಾಗಿವೆ. ನಮ್ಮದು ಗುತ್ತಿಗೆದಾರರ ಮೇಲೆ ಹೋರಾಟವಲ್ಲ, ವೇತನಕ್ಕಾಗಿ ನಮ್ಮ ಬೇಡಿಕೆಯಷ್ಟೆ. ನಮಗೆ ವೇತನ ನೀಡದಿದ್ದಲ್ಲಿ ನಾವು ಕೆಲಸಕ್ಕೆ ಕದಲುವುದಿಲ್ಲ. ಮುಷ್ಕರ ನಡೆಸಿಯೇ ಸಿದ್ಧ. ವೇತನ ನೀಡಿ ಇಲ್ಲವೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಲಿ ಎಂದು ಆಗ್ರಹಿಸಿ ಕಂಪೆನಿ ಎದುರು ಮುಷ್ಕರ ಹೂಡಿದ್ದಾರೆ. ಗುತ್ತಿಗೆದಾರ ಬೆಳ್ತಂಗಡಿಯಲ್ಲಿ ಕಾಮಗಾರಿ ಪ್ರಾರಂಭಿಸುವಾಗ 3,000 ಅಧಿಕ ನೌಕರರು ಇದ್ದು.ಇದೀಗ ಗುತ್ತಿಗೆದಾರ ಸರಿಯಾಗಿ ಸಂಬಳ ನೀಡಿದದ್ದರಿಂದ ಕೇವಲ 145 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ನೌಕರರು ಮಾಹಿತಿ ನೀಡಿದ್ದಾರೆ.



