
ಬೆಳ್ತಂಗಡಿ : ದಿನಾಂಕ 11.03.2026 ರಂದು ಬೆಳ್ತಂಗಡಿ ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಅನಾರೋಗ್ಯಕ್ಕೀಡಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ವೈದ್ಯಕೀಯ ಸೂಚನಾಪತ್ರ ಬಂದ ಹಿನ್ನೆಲೆಯಲ್ಲಿ, ಆ ವ್ಯಕ್ತಿಯನ್ನು ವಿಚಾರಿಸಿ, ವಿಡಿಯೋ ಹೇಳಿಕೆ ದಾಖಲಿಸಲಾಗಿದ್ದು, ಅದರಂತೆ, ಆ ವ್ಯಕ್ತಿಯು ದಿನಾಂಕ 11.03.2026 ರಂದು ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು, ಸೇವಿಸುವುದಕ್ಕಾಗಿ ರಾತ್ರಿ ತೆಗೆಯುವಾಗ ಕಣ್ತಪ್ಪಿನಿಂದ ಸದ್ರಿ ಮದ್ಯದ ಬಾಟಲಿಯ ಬಳಿಯಿದ್ದ ಕೀಟನಾಶಕವನ್ನು ತೆಗೆದು ಸೇವಿಸಿರುವುದಾಗಿದೆ. ಇದರಿಂದಾಗಿ ಆರೋಗ್ಯದಲ್ಲಿ ಏರುಪೇರಾದಾಗ ತನ್ನ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಆಸ್ಪತ್ರೆಗೆ ದಾಖಲಿಸಿರುತ್ತಾರೆ. ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದು, ಆದ್ದರಿಂದ ಈ ಬಗ್ಗೆ ಯಾವುದೇ ಕಾನೂನು ಕ್ರಮದ ಅಗತ್ಯವಿರುವುದಿಲ್ಲ ಎಂಬುದಾಗಿ ಹೇಳಿಕೆ ನೀಡಿರುತ್ತಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ, ಆ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ, ಜಿಲ್ಲಾ ವೈದ್ಯಾಧಿಕಾರಿಯವರಿಗೆ ಕೋರಲಾಗಿರುತ್ತದೆ. ಆತನ ಮುಂದಿನ ಹೇಳಿಕೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಅರುಣ್ ಕೆ ಸ್ಪಷ್ಟನೆ ನೀಡಿದ್ದಾರೆ.


