ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನ ಹೊಸ ಮುಖ್ಯಮಂತ್ರಿಯೊಂದಿಗೆ ನಡೆಯಲಿದೆ ಎಂದು ಕಾರ್ಕಳ ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿರುವ ಆರೋಪಕ್ಕೆ ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿರುವ ಶಾಸಕ ಸುನೀಲ್ ಕುಮಾರ್, ಉಪಚುನಾವಣೆ ಫಲಿತಾಂಶ ಬರುವ ಮೊದಲೇ ಸೋಲಿನ ಮುನ್ಸೂಚನೆ ಸಿಕ್ಕಿರುವ ಕಾರಣ ತಮ್ಮ ಸ್ಥಾನಕ್ಕೆ ಚ್ಯುತಿ ಬರುವ ಭಾವನೆಯಲ್ಲಿ ಸಿಎಂ ಸಿದ್ದರಾಮಯ್ಯ ನೂರ ಒಂದನೇ ಸುಳ್ಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಪರೋಕ್ಷವಾಗಿ ಅವರ ಶಾಸಕರಿಗೇ ಅಫರ್ ಕೊಟ್ಟಿದ್ದು, ಹೈಕಮಾಂಡ್ ಅನ್ನು ಬೆದರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿರುವ ಸುನೀಲ್ ಕುಮಾರ್, ಹೈಕಮಾಂಡ್ ಗಡುವು ಮುಕ್ತಾಯವಾಗುತ್ತಿರುವ ಕಾರಣ ನನ್ನ ಮುಟ್ಟಲು ಬರಬೇಡಿ ಎಂಬ ಸಂದೇಶ ಕೊಟ್ಟಿದ್ದಾರೆ ಎಂದಿದ್ದಾರೆ.
ಬಿಜೆಪಿ ಐದು ವರ್ಷ ವಿಪಕ್ಷದಲ್ಲಿ ಕುಳಿತುಕೊಳ್ಳಲಿದೆ ಎಂದು ಇದೇ ವೇಳೆ ಹೇಳಿರುವ ಸುನೀಲ್ ಕುಮಾರ್, ನಮಗೆ ಸರ್ಕಾರ ರಚನೆ ಮಾಡುವ ಹಪಹಪಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.