Wednesday, June 3, 2026
Homeಕರಾವಳಿಮಂಗಳೂರು50 ಕೋಟಿ ಆಫರ್ ಆರೋಪ: ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ; ಸಿಎಂಗೆ ಮಾಜಿ ಸಚಿವ...

50 ಕೋಟಿ ಆಫರ್ ಆರೋಪ: ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ; ಸಿಎಂಗೆ ಮಾಜಿ ಸಚಿವ ರೇಣುಕಾಚಾರ್ಯ ಸವಾಲು

- Advertisement -
- Advertisement -

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಬಂದು ಯಾವ ಶಾಸಕರಿಗೆ ಬಿಜೆಪಿ ಐವತ್ತು ಕೋಟಿ ರೂಪಾಯಿಯ ಆಫರ್ ಕೊಟ್ಟಿದೆ ಅಂತ ಹೇಳಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸವಾಲು ಹಾಕಿದ್ದಾರೆ‌.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್ ನೀಡಿರುವ ಬಗ್ಗೆ ನಿನ್ನೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಮಾಡಿದ್ದ ಆರೋಪಕ್ಕೆ ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಬಿಜೆಪಿ ನಾಯಕರು ಯಾವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದರು, ಯಾರು ಆಫರ್ ಕೊಟ್ಟರು ಅಂತ ನಿರೂಪಿಸಿ, ನಿಮ್ಮ‌ ಹೇಳಿಕೆಯ ಬಗ್ಗೆ ಚರ್ಚೆಗೆ ಬನ್ನಿ, ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಮೂರು ಉಪ ಚುನಾವಣೆಗಳಲ್ಲಿ ಸೋಲಾಗುವ ಭಯದಿಂದ ಸಿದ್ದರಾಮಯ್ಯ, 50 ಕೋಟಿ ರೂಪಾಯಿಗಳ ಆಫರ್ ಹೇಳಿಕೆ ಕೊಟ್ಟಿದ್ದು, ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ ಎಂದು ಆರೋಪಿಸಿರುವ ಎಂ.ಪಿ. ರೇಣುಕಾಚಾರ್ಯ,ಮುಡಾ ಪ್ರಕರಣ, ವಾಲ್ಮೀಕಿ ನಿಗಮದಲ್ಲಿ ಹಗಲು ದರೋಡೆ ಮತ್ತು ವಕ್ಫ್ ಅಕ್ರಮ ವಿವಾದಗಳ ಸುಳಿಯಲ್ಲಿ ಸಿಕ್ಕಿಕೊಂಡು ಸಿಎಂ ಸಿದ್ದರಾಮಯ್ಯ ಹೈರಾಣಾಗಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೇ, ಮುಡಾ ಸೈಟ್ ವಿಚಾರವಾಗಿ ಇಡಿಯಿಂದ ಸಿಎಂಗೆ ಬಹಳ ಬೇಗ ನೊಟೀಸ್ ಬರಬಹುದಾಗಿದ್ದು, ಇದನ್ನೆಲ್ಲಾ ಮರೆ ಮಾಚಲು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿರುವ ರೇಣುಕಾಚಾರ್ಯ, ಬಿಜೆಪಿ ಶಾಸಕರು ಕಾಂಗ್ರೆಸ್ ನವರ ಆಮಿಷಗಳಿಗೆ ಬಲಿಯಾಗಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಉರುಳಿಸಲು ಬಿಜೆಪಿ ಐವತ್ತು ಕಾಂಗ್ರೆಸ್ ಶಾಸಕರಿಗೆ ಐವತ್ತು ಕೋಟಿ ರೂಪಾಯಿಗಳ ಆಫರ್ ನೀಡಿತ್ತು ಎಂದು ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

- Advertisement -

Latest News

error: Content is protected !!