ಮಂಡ್ಯ; ಪರಿಚಯದವರು ಬಟ್ಟೆ ಕೊಡ್ತಾರೆ ತಾ ಎಂದ ಮಗನ ಮಾತು ನಂಬಿ ಜೈಲಿಗೆ ಬಟ್ಟೆ ತೆಗೆದುಕೊಂಡು ಹೋದ ತಂದೆ ಅರೆಸ್ಟ್ ಆಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ನಿವಾಸಿ ಶಿವಣ್ಣ ಅರೆಸ್ಟ್ ಆದ ತಂದೆ.
ಶಿವಣ್ಣ ಅವರ ಮಗ ಮಧುಸೂದನ್ ಮಂಡ್ಯ ಜೈಲಿನಲ್ಲಿದ್ದಾನೆ. ಜೈಲಿನಲ್ಲಿದ್ದ ಮಧುಸೂದನ್ ತಂದೆ ಶಿವಣ್ಣ ಅವರಿಗೆ ಕರೆ ಮಾಡಿ “ನನ್ನ ಪರಿಚಿತರೊಬ್ಬರು ಮಳವಳ್ಳಿಯಲ್ಲಿ ಬಟ್ಟೆ ಇದ್ದ ಬ್ಯಾಗ್ ಕೊಡುತ್ತಾರೆ, ತೆಗೆದುಕೊಂಡು ಬಾ” ಎಂದು ಹೇಳಿದ್ದಾನೆ. ಮಗನ ಮಾತು ನಂಬಿ ಶಿವಣ್ಣ ಮಳ್ಳವಳ್ಳಿಯಲ್ಲಿ ಅಪರಿಚಿತನಿಂದ ಬಟ್ಟೆ ಇದ್ದ ಬ್ಯಾಗ್ ಪಡೆದು, ಮಂಡ್ಯದ ಕಾರಾಗೃಹಕ್ಕೆ ಬಂದಿದ್ದಾರೆ. ಕಾರಾಗೃಹದಲ್ಲಿನ ಜೈಲು ಸಿಬ್ಬಂದಿ ಬ್ಯಾಗ್ ಅನ್ನು ಪರಿಶೀಲಿಸಿದಾಗ 20 ಗ್ರಾಂ ಗಾಂಜಾ ಪತ್ತೆಯಾಗಿದೆ.
ತಕ್ಷಣ ಸಿಬ್ಬಂದಿ ಶಿವಣ್ಣ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗನ ಸೂಚನೆಯಂತೆ ಬ್ಯಾಗ್ ತಂದಿರುವುದಾಗಿ ಶಿವಣ್ಣ ಹೇಳಿದ್ದಾರೆ. ಬಳಿಕ, ಪೊಲೀಸರು ಎನ್ಡಿಪಿಎಸ್ ಕಾಯ್ದೆಯಡಿ ಶಿವಣ್ಣ ಅವರನ್ನು ಬಂಧಿಸಿದ್ದಾರೆ. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.