ಕೊರೊನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಮೂರನೇ ಬಲಿಯಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ಮಹಿಳೆ ಮೃತಪಟ್ಟಿದ್ದಾರೆ.
ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಕಸಬಾದ ಮಹಿಳೆ ಮೃತಪಟ್ಟಿದ್ದಾರೆ. ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಕೋವಿಡ್ ಆಸ್ಪತ್ರೆ ವೆನ್ಲಾಕ್ ಗೆ ದಾಖಲು ಮಾಡಲಾಗಿತ್ತು. ಇವರ ಗಂಟಲ ದ್ರವ ಪರೀಕ್ಷೆ ಮಾಡಿದ ನಂತರ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿತ್ತು.
ಇಂದು ಮೃತಪಟ್ಟ ಮಹಿಳೆಯ ನೆರೆಮನೆಯ ಇಬ್ಬರು ಈಗಾಗಲೇ ಕೊರೋನಾದಿಂದಾಗಿ ಮೃತರಾಗಿದ್ದಾರೆ. ಈ ಘಟನೆಯ ನಂತರ ಬಂಟ್ವಾಳ ಪೇಟೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.
ಈ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾದಿಂದ ಮೃತರ ಸಂಖ್ಯೆ ಮೂರಕ್ಕೆ ಏರಿದೆ.
ಈ ಮಧ್ಯೆ ಸೋಂಕಿತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಒಂದೇ ದಿನ 30 ಕೊರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 565ಕ್ಕೇರಿಕೆಯಾಗಿದೆ. ಇಲ್ಲಿಯವರೆಗೆ 22 ಜನರು ಮೃತಪಟ್ಟಿದ್ದು, 229 ಮಂದಿ ಗುಣಮುಖರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 58 ವರ್ಷದ ಮಹಿಳೆ, ವಿಜಯಪುರದ 62 ವರ್ಷದ ವ್ಯಕ್ತಿ ಮತ್ತು 33 ವರ್ಷದ ಮಹಿಳೆ, ತುಮಕೂರಿನ 65 ವರ್ಷದ ಮಹಿಳೆ, ಬೆಂಗಳೂರು ನಗರದ 20 ಹಾಗೂ 28 ವರ್ಷದ ಯುವಕರು, 63 ವರ್ಷದ ವೃದ್ಧ ಮತ್ತು ದಾವಣಗೆರೆಯ 69 ವರ್ಷದ ವ್ಯಕ್ತಿ ಸೋಂಕಿಗೆ ಗುರಿಯಾಗಿದ್ದಾರೆ.
ಉಳಿದಂತೆ ಬೆಳಗಾವಿಯ ಹಿರೇಬಾಗೇವಾಡಿಯ 24 ವರ್ಷದ ಇಬ್ಬರು ಮಹಿಳೆಯರು, 27 ವರ್ಷದ ವ್ಯಕ್ತಿ, 18 ವರ್ಷದ ಯುವಕ, 48 ವರ್ಷದ ಮಹಿಳೆ , 50 ವರ್ಷದ ವ್ಯಕ್ತಿ, 27 ವರ್ಷದ ಮಹಿಳೆ, 43, 16, 36 ವರ್ಷದ ವ್ಯಕ್ತಿಗಳು, 8 ವರ್ಷದ ಬಾಲಕ, 36 ವರ್ಷದ ವ್ಯಕ್ತಿ, ಬೆಳಗಾವಿ ಹುಕ್ಕೇರಿಯ 9 ವರ್ಷದ ಬಾಲಕ ಮತ್ತು 75 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.