
ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ (IPS) ಅವರ ನೇತೃತ್ವದ ತಂಡವು ದಾಳಿ ನಡೆಸಿ, ನಿಷೇಧಿತ ಎಂ.ಡಿ.ಎಂ.ಎ ಮಾದಕ ದ್ರವ್ಯ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದೆ.
ಮಂಗಳೂರಿನ ಅಡ್ಯಾರ್ನ ನಾಶೀರ್ ಹುಸೇನ್ (37), ಬಂಟ್ವಾಳದ ಗೋಳ್ತಮಜಲಿನ ಮಹಮ್ಮದ್ ಜುನೈದ್ (38) ಹಾಗೂ ಮಂಗಳೂರಿನ ಕಂಕನಾಡಿಯ ಮೊಹಮ್ಮದ್ ಅಫ್ರೀದಿ (24) ಬಂಧಿತ ಆರೋಪಿಗಳಾಗಿದ್ದಾರೆ.
ದಿನಾಂಕ 12-08-2026 ರಂದು ನಡೆದ ಈ ಕಾರ್ಯಾಚರಣೆಯಲ್ಲಿ ಸುಮಾರು ₹2.25 ಲಕ್ಷ ಮೌಲ್ಯದ 22.57 ಗ್ರಾಂ ಎಂ.ಡಿ.ಎಂ.ಎ, 30.34 ಗ್ರಾಂ ಗಾಂಜಾ, ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ 5 ಮೊಬೈಲ್ ಫೋನ್ಗಳು ಸೇರಿದಂತೆ ಒಟ್ಟು ₹4.90 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ (ಅ.ಕ್ರ: 112/2026, ಕಲಂ: 8(C) ಹಾಗೂ 22(C)) ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಈ ಯಶಸ್ವಿ ದಾಳಿಯಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಕೆ.ವಿ, ಪಿ.ಎಸ್.ಐ ರನ್ನ ಗೌಡ ಎಸ್ ಪಾಟೀಲ್, ಪ್ರೊ. ಪಿ.ಎಸ್.ಐಗಳಾದ ಶಿವರಾಮ್, ಫಕೀರಪ್ಪ ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದು, ಜಿಲ್ಲಾ ತಾಂತ್ರಿಕ ವಿಭಾಗದ ದಿವಾಕರ್ ಮತ್ತು ಸಂಪತ್ ಸಹಕರಿಸಿದ್ದಾರೆ.


