
ಮಂಗಳೂರು: ಭಾರತದ ಪ್ರಮುಖ ಅಂತರ್‌ರಾಷ್ಟ್ರೀಯ ಬ್ಯಾಂಕ್ ಆದ ‘ಬ್ಯಾಂಕ್ ಆಫ್ ಬರೋಡಾ’, 2025-26ನೇ ಆರ್ಥಿಕ ವರ್ಷದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ₹20,021 ಕೋಟಿಗಳ ಸ್ವತಂತ್ರ ನಿವ್ವಳ ಲಾಭವನ್ನು ದಾಖಲಿಸಿದೆ.
ಈ ಭರ್ಜರಿ ಆರ್ಥಿಕ ಪ್ರಗತಿಯ ಹಿನ್ನೆಲೆಯಲ್ಲಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಾ. ದೇವದತ್ತ ಚಂದ್ ಅವರು ₹2,811 ಕೋಟಿ ರೂಪಾಯಿಗಳ ಲಾಭಾಂಶದ (ಡಿವಿಡೆಂಡ್) ಚೆಕ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಸ್ತಾಂತರಿಸಿದರು. ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿ ಸಂಜಯ್ ಲೋಹಿಯಾ ಹಾಗೂ ಬ್ಯಾಂಕಿನ ಉನ್ನತ ನಿರ್ದೇಶಕರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಪ್ರತಿ ₹2 ಮುಖಬೆಲೆಯ ಈಕ್ವಿಟಿ ಷೇರಿಗೆ ₹8.50 ಲಾಭಾಂಶವನ್ನು ಘೋಷಿಸಲಾಯಿತು.
ಮಾರ್ಚ್ 31, 2026ರ ವೇಳೆಗೆ ಬ್ಯಾಂಕಿನ ಒಟ್ಟು ಜಾಗತಿಕ ವ್ಯವಹಾರವು ₹30 ಲಕ್ಷ ಕೋಟಿಗಳನ್ನು ಮೀರಿದ್ದು, ಈ ಅಭೂತಪೂರ್ವ ಯಶಸ್ಸು ಬ್ಯಾಂಕಿನ ದೃಢವಾದ ಹಣಕಾಸು ಸ್ಥಿತಿ ಹಾಗೂ ಪಾಲುದಾರರ ಮೌಲ್ಯವರ್ಧನೆಗೆ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬ್ಯಾಂಕ್ ಪ್ರಕಟಿಸಿದೆ.


