Tuesday, July 1, 2025
Homeಕರಾವಳಿಮಂಗಳೂರಿನಲ್ಲಿ ನಡೆದ ಮಗು ಅದಲು ಬದಲು ಪ್ರಕರಣ ಸುಖಾಂತ್ಯ: ಮಗುವಿನ ತಂದೆ ಯಾರು ಎಂಬುವುದು ಡಿಎನ್ಎ...

ಮಂಗಳೂರಿನಲ್ಲಿ ನಡೆದ ಮಗು ಅದಲು ಬದಲು ಪ್ರಕರಣ ಸುಖಾಂತ್ಯ: ಮಗುವಿನ ತಂದೆ ಯಾರು ಎಂಬುವುದು ಡಿಎನ್ಎ ವರದಿಯಿಂದ ಬಯಲು

spot_img
- Advertisement -
- Advertisement -

ಮಂಗಳೂರು : ಕಳೆದ ವರ್ಷ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದ  ‘ಮಗು ಅದಲು ಬದಲು’ ಘಟನೆ ಇದೀಗ ಸುಖಾಂತ್ಯ ಕಂಡಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಬಂದರು ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪ್ರಯೋಗಾಲಯದಲ್ಲಿ ನಡೆಸಲಾದ ಡಿಎನ್‌ಎ ಪರೀಕ್ಷೆ ವರದಿ ತನಿಖಾಧಿಕಾರಿಯ ಕೈಸೇರಿದ್ದು, ಅದರಲ್ಲಿ ದೂರುದಾರ ಮುಸ್ತಫಾ ಅವರೇ ಮಗುವಿನ ತಂದೆ ಎಂಬುವುದು ಬಯಲಾಗಿದೆ.

‘ನನಗೆ ಜನಿಸಿದ ಆರೋಗ್ಯವಂತ ಹೆಣ್ಣು ಮಗುವನ್ನು ಬದಲಿಸಿ, ಆಸ್ಪತ್ರೆಯ ಸಿಬ್ಬಂದಿ ಅನಾರೋಗ್ಯ ಪೀಡಿದ ಗಂಡು ಮಗುವನ್ನು ನಮಗೆ ನೀಡಿದ್ದರು’ ಎಂದು ಮುಸ್ತಫಾ ಆರೋಪಿಸಿದ್ದರು. ಈಗ ಪ್ರಯೋಗಾಲಯದಿಂದ ಬಂದಿರುವ ಡಿಎನ್‌ಎ ವರದಿಯು ಗಂಡು ಮಗು ಮುಸ್ತಫಾ ಅವರದ್ದೇ ಎಂಬುದನ್ನು ಖಚಿತಪಡಿಸಿದೆ. ಇದರ ಆಧಾರದಲ್ಲಿ ಪ್ರಕರಣದ ಬಗ್ಗೆ ಬಂದರು ಪೊಲೀಸರು ‘ಬಿ’ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

2021ರ ಸೆಪ್ಟೆಂಬರ್ 27ರಂದು ಮುಸ್ತಫಾ ಅವರ ಪತ್ನಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಆಸ್ಪತ್ರೆಯ ಸಿಬ್ಬಂದಿಯ ಎಡವಟ್ಟಿನಿಂದ ಜನ್ಮ ದಾಖಲೆಯಲ್ಲಿ ‘ಹೆಣ್ಣು ಮಗು’ (ಲಿಂಗ ಕಾಲಂನಲ್ಲಿ ಎಂ ಬದಲು ಎಫ್) ಎಂದು ನಮೂದಾಗಿತ್ತು. ಹುಟ್ಟಿದ ಮಗುವಿನ ತೂಕ ಕೇವಲ 1.4 ಕೆ.ಜಿ. ಇತ್ತು (ಆರೋಗ್ಯವಂತ ಮಗುವಿನ ತೂಕ ಕನಿಷ್ಠ 2.5 ಕೆ.ಜಿ. ಇರುತ್ತದೆ). ಮಗುವಿನಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ಕೂಡಲೇ ಅದನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ (ಎನ್‌ಐಸಿಯು) ಸ್ಥಳಾಂತರಿಸಲಾಗಿತ್ತು.

ನನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ನಮಗೆ ಜನಿಸಿದ್ದು ಹೆಣ್ಣು ಮಗುವಲ್ಲ ಎಂಬ ವಿಚಾರ ಕೆಲವು ದಿನಗಳ ನಂತರ ಮುಸ್ತಫಾ ಅವರಿಗೆ ತಿಳಿಯಿತು. ಇದಾದ ಬಳಿಕ, ಅ. 14ರಂದು ಮಗುವನ್ನು ಡಿಸ್ಚಾರ್ಜ್ ಮಾಡಿಸಿ, ಕುಂದಾಪುರಕ್ಕೆ ಕರೆದೊಯ್ದು, ಅಲ್ಲಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ತಮಗೆ ನೀಡಿರುವುದು ಹೆಣ್ಣು ಮಗುವಲ್ಲ, ಗಂಡು ಮಗು ಎಂಬುದು ತಿಳಿಯಿತು. ಮಗುವಿನ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಮರುದಿನವೇ ಮತ್ತೆ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಮಗು ಚಿಕಿತ್ಸೆಗೆ ಸ್ಪಂದಿಸದೆ 48 ದಿನಗಳ ಬಳಿಕ ಕೊನೆಯುಸಿರೆಳೆದಿತ್ತು.

ಬಳಿಕ ಮುಸ್ತಫಾ ಅವರು ಆಸ್ಪತ್ರೆಯ ಬೇಜವಾಬ್ದಾರಿತನ ಆರೋಪಿಸಿ ಉತ್ತರ(ಬಂದರು)  ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮುಸ್ತಫಾ ಅವರು ನೀಡಿದ ದೂರಿನ ಆಧಾರದಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ನ್ಯಾಯಾಲಯವೂ ಒಪ್ಪಿಗೆ ಸೂಚಿಸಿತ್ತು.

ಈ ಅವಧಿಯಲ್ಲಿ ಪ್ರತಿಭಟನೆ ನಡೆದಿತ್ತಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಆಸ್ಪತ್ರೆ ವಿರುದ್ಧ ಸಾಕಷ್ಟು ಟ್ರೋಲ್ ಆಗಿತ್ತು. ಮುಸ್ತಾಫರ ಪತ್ನಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞ ಡಾ.ಗಿರೀಶ್ ಎಂಬವರು ಹುದ್ದೆ ತ್ಯಜಿಸಿದ್ದರು. ಗಂಡು ಬದಲು ಹೆಣ್ಣು ಮಗು ಎಂದು ತಪ್ಪಾಗಿ ನಮೂದಿಸಿದ ಇಬ್ಬರು ಕಿರಿಯ ವೈದ್ಯರು ಕೂಡ ಕೆಲಸಕ್ಕೆ ರಾಜಿನಾಮೆ ನೀಡಿದ್ದರು. ಇದೀಗ ಡಿಎನ್ಎ ವರದಿಯಿಂದ ಮುಸ್ತಫಾ ಅವರದ್ದೇ ಮಗು ಅನ್ನೋದು ಬಹಿರಂಗವಾಗಿದೆ.

- Advertisement -
spot_img

Latest News

error: Content is protected !!