ಸುಳ್ಯ; ಬಾಡಿಗೆ ನೆಪದಲ್ಲಿ ಕರೆದುಕೊಂಡು ಹೋಗಿ ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ವೈದ್ಯಕೀಯ ವರದಿ ಬಂದಿದ್ದು ಹಲ್ಲೆಯಿಂದಾಗಿಯೇ ವ್ಯಕ್ತಿ ಸಾವನ್ನಪ್ಪಿರೋದು ದೃಢವಾಗಿದ್ದು ಅದರಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಕಸಬ ನಿವಾಸಿ ಮೊಹಮ್ಮದ್ ರಫೀಕ್ (41), ಸುಳ್ಯ ಸಂಪಾಜೆ ನಿವಾಸಿ ಮನೋಹರ್ ಕೆ ಎಸ್ @ ಮನು (42) ಬಂಧಿತರು.
ಸುಳ್ಯ ಕಸ್ಬಾ ಗ್ರಾಮದ ನಿವಾಸಿ ಸುಮಯ್ಯಾ (35) ಎಂಬವರ ಗಂಡ ಅಬ್ದುಲ್ ಜಬ್ಬಾರ್ ಎಂಬವರನ್ನು, ದಿನಾಂಕ 16.10.2025 ರಂದು ಮಧ್ಯಾಹ್ನ ವೇಳೆ, ಆರೋಪಿಗಳಾದ ಮೊಹಮ್ಮದ್ ರಫೀಕ್ ಮತ್ತು ಇತರರು, ಬಾಡಿಗೆಯ ನೆಪದಲ್ಲಿ ದುಗ್ಗಲಡ್ಕ ಎಂಬಲ್ಲಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ, ಅಲ್ಲಿಂದ ಸುಳ್ಯ ಕಲ್ಲುಗುಂಡಿಗೆ ಕರೆತಂದು ಮಾರಣಾಂತಿಕ ಹಲ್ಲೆ ನಡೆಸಿ, ಜೀವಬೆದರಿಕೆ ಒಡ್ಡಿ ಕಳುಹಿಸಿದ್ದರು. ದಿನಾಂಕ 17.10.2025 ರಂದು ಅಬ್ದುಲ್ ಜಬ್ಬಾರ್ ಮನೆಯಲ್ಲಿದ್ದಾಗ ಅನಾರೋಗ್ಯಕ್ಕೀಡಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಡ ಅಬ್ದುಲ್ ಜಬ್ಬಾರ್‌ನ ಸಾವಿಗೆ ರಫೀಕ್ ಪಡು ಮತ್ತು ಇತರರು ಕಾರಣರಾಗಿರುತ್ತಾರೆ ಎಂಬುದಾಗಿ ದಿನಾಂಕ:18.10.2025 ರಂದು ನೀಡಿದ ದೂರಿನ ಮೇರೆಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 125/2025, ಕಲಂ: 105 ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿರುತ್ತು. ಇದೀಗ ಆರೋಪಿಗಳು ನಡೆಸಿದ ಹಲ್ಲೆಯ ಪರಿಣಾಮ ಅಬ್ದುಲ್ ಜಬ್ಬಾರ್ ರವರು ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿರುವುದರಿಂದ ಹಲ್ಲೆ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.ಇನ್ನು ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಕೃತ್ಯಕ್ಕೆ ಬಳಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.


