ಕಡಬ: ಕೋಡಿಂಬಾಳ ಎಂಬಲ್ಲಿ ಬಾಲಕಿ ಬಲಾತ್ಕಾರವಾಗಿ ಅತ್ಯಾಚಾರ ನಡೆಸಲು ಯತ್ನಿಸಿದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದ ಆರೋಪಿ ಜಾನ್ ಎಂಬಾತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸ್ ಹಾಗೂ ಮಕ್ಕಳ ಇಲಾಖೆ ಅಸಡ್ಡೆ ಮಾಡುತ್ತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.
ಬಾಲಕಿಗೆ ಹಾಗೂ ವೃದ್ಧೆಗೆ ಆರೋಪಿ ಜಾನ್ ಎಂಬಾತ ಹಲ್ಲೆ ನಡೆಸಿ, ಕಿರುಕುಳ ನೀಡುತ್ತಿರುವ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್. ಪಿ ಅವರಿಗೂ ಬಾಲಕಿ ದೂರನ್ನು ನೀಡಿದ್ದಳು.
ಹಲ್ಲೆಯಿಂದಾಗಿ ಬಾಲಕಿ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಳು. ಆರೋಪಿಯ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿದಂತೆ ವಿವಿಧ ಅಪರಾಧ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಾಗಿತ್ತು.
ಇದೀಗ ಪ್ರಕರಣ ನಡೆದು ಹದಿನೈದು ದಿನಗಳು ಕಳೆದರೂ ಆರೋಪಿಯ ಬಂಧನವಾಗಲಿ, ಕಾನೂನು ಕ್ರಮ ಕೈಗೊಳ್ಳುವುದಾಗಲಿ ನಡೆಯುತ್ತಿಲ್ಲ ಆರೋಪಿ ಬಂಧನವಾಗದ ಕಾರಣ ಸಂತ್ರಸ್ತ ಬಾಲಕಿ ಹಾಗೂ ಆಕೆಯ ಅಜ್ಜಿಯು ಭಯದಿಂದಲೇ ಜೀವನ ಸಾಗಿಸುವಂತಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.