ಕಡಬ:ಬಾಡಿಗೆ ಮನೆಯಲ್ಲಿದ್ದ ವಾಸವಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿ, ಆತ ಕಿಟಿಕಿ ಮುರಿದು ಪರಾರಿಯಾಗಿ ಸಂಪರ್ಕಕ್ಕೆ ಸಿಗದ ಘಟನೆ ಕಡಬದ ಪಿಜಕ್ಕಳ ದ್ವಾರ ಸಮೀಪದ ಬೈಲಂಗಡಿ ಎಂಬಲ್ಲಿ ನಡೆದಿದೆ.
ಇಲ್ಲಿನ ಬಾಡಿಗೆ ಮನೆಗೆ ಶನಿವಾರ ರಾತ್ರಿ 2:30 ರ ಸುಮಾರಿಗೆ ನುಗ್ಗಿದ ಅಪರಿಚಿತರ ತಂಡ ಒಳಗೆ ಮಲಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದೆ. ಮಲಗಿದ್ದ ಯುವಕ ಪ್ರಾಣ ಉಳಿಸಲು ಹಿಂಬದಿಯ ಕಿಟಕಿಯನ್ನು ಸಿನಿಮೀಯ ರೀತಿಯಲ್ಲಿ ಮುರಿದು ಬಳಿಕ ಜಿಗಿದು ನೆರೆಮನೆಗೆ ರಕ್ಷಣೆಗೆ ಓಡಿದ್ದಾನೆ.
ಘಟನೆ ನಡೆದ ತಕ್ಷಣ ಸ್ಥಳೀಯರ ನೆರವಿನಿಂದ ರಾತ್ರಿಯೇ ಪೊಲೀಸ್ ಠಾಣೆಗೆ ಹೋಗಿದ್ದು ಘಟನೆ ಸಮರ್ಪಕ ಮಾಹಿತಿ ವಿವರಿಸದ ಹಿನ್ನೆಲೆ ಪೊಲೀಸರು ಮುಂಜಾನೆ ಬರುವಂತೆ ಹೇಳಿದ್ದಾರೆ ಎನ್ನಲಾಗಿದೆ.ಮುಂಜಾನೆ ಪಕ್ಕದ ಮನೆಯಿಂದ ಹೋದ ವ್ಯಕ್ತಿ ಸಾಯಂಕಾಲದವರೆಗೂ ಸಂಪರ್ಕಕ್ಕೆ, ಮಾತುಕತೆಗೂ ಸಿಗದ ಹಿನ್ನಲೆ ಸ್ಥಳೀಯರು ಆತಂಕಗೊಂಡಿದ್ದಾರೆ.
ಈ ಮಧ್ಯೆ ರಾತ್ರಿಯೇ ಬಾಡಿಗೆ ಮನೆಯ ಮಾಲೀಕರಿಗೂ ವಿಷಯ ಗೊತ್ತಾಗಿ ಯುವಕನಿಗೆ ಕರೆ ಮಾಡಿದಾಗ ಆ ಕರೆಯನ್ನು ಬೇರೆ ವ್ಯಕ್ತಿಗಳು ಸ್ವೀಕರಿಸಿ ಮಾಲೀಕರಿಗೆ ಬಾಡಿಗೆ ಮನೆ ಕೊಟ್ಟಿರುವುದು ಯಾಕೆ, ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಸಂಜೆಯ ವೇಳೆ ಎಸ್.ಐ. ಅಭಿನಂದನ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಸ್ಥಳದಲ್ಲಿ ಕಬ್ಬಿಣದ ಕತ್ತಿಯೊಂದು ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.