ಬಂಟ್ವಾಳ : ಜ್ಯೋತಿಷಿಯಿಂದಾಗಿಯೇ ಪತ್ನಿ ತನಗೆ ವಿಚ್ಛೇದನ ನೀಡಿದಳು ಅನ್ನೋ ದ್ವೇಷದಿಂದ ಬಿ.ಸಿ.ರೋಡಿನಲ್ಲಿ ಜ್ಯೋತಿಷಿ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಂಜಿಕಲ್ಲು ನಿವಾಸಿ ಮೋಹನ್ ಪ್ರಭು ಬಂಧಿತ ಆರೋಪಿ.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದಲ್ಲಿ ಪಂಡಿತ್ ಲಕ್ಷ್ಮಿಕಾಂತ್ ಭಟ್ ಹೆಸರಿನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಮೂಲತಃ ಬಾಗಲಕೋಟೆ ನಿವಾಸಿ ಹನುಮಂತಪ್ಪ ಎಂಬವರ ಮೇಲೆ ಇತ್ತೀಚೆಗೆ ಹಲ್ಲೆ ನಡೆದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಆರೋಪಿ ಮೋಹನ್ ಪ್ರಭುನ ಮೊದಲ ಪತ್ನಿ ವಿಚ್ಛೇದನ ನೀಡಿದ್ದು ಇದಕ್ಕೆ ಜ್ಯೋತಿಷಿ ಹನುಮಂತಪ್ಪ ಕಾರಣ ಎಂಬ ದ್ವೇಷದಿಂದ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹನ್ ಪ್ರಭುನ ಮೊದಲ ಪತ್ನಿಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಪಾರವಾದ ನಂಬಿಕೆ ಇತ್ತು. ಹನುಮಂತಪ್ಪ ಅವರ ಬಳಿಗೆ ಜ್ಯೋತಿಷ್ಯ ಕೇಳಲು ಬರುತ್ತಿದ್ದರು. ಈ ವೇಳೆ, ಪ್ರಭು ಜೊತೆ ನಿಮ್ಮ ಸಂಸಾರ ಸರಿ ಹೋಗುವುದಿಲ್ಲ ಎಂದು ಜ್ಯೋತಿಷ್ಯ ಹೇಳಿದ್ದರಿಂದ ಆಕೆ ಪ್ರಭುಗೆ ವಿಚ್ಚೇದನ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ದ್ವೇಷ ತೀರಿಸಲು ಒಂದು ವರ್ಷದಿಂದ ಕಾಯುತ್ತಿದ್ದು ಮಾ.19ರಂದು ಜ್ಯೋತಿಷ್ಯ ಕೇಳುವ ನೆಪದಲ್ಲಿ ಜ್ಯೋತಿಷ್ಯಾಲಯಕ್ಕೆ ಬಂದ ಆರೋಪಿ ಪ್ರಭು ಕಬ್ಬಿಣದ ರಾಡ್ ನಿಂದ ತಲೆಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.