ಹೊನ್ನಾವರ: ಮನೆಯ ಮುಂದೆ ಇರಿಸಿದ್ದ ಅಡಿಕೆ ಮೂಟೆ ಕಳ್ಳತನವಾಗಿ ಕಳ್ಳತನದ ದೃಶ್ಯಾವಳಿ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸಕುಳಿ ಗ್ರಾಮದಲ್ಲಿ ನಡೆದಿದೆ.
ಸುರೇಶ್ ಶೆಟ್ಟಿ ಎಂಬವರಿಗೆ ಸೇರಿದ ಅಡಿಕೆ ಮೂಟೆ ಕಳ್ಳತನವಾಗಿದ್ದು, ರಾತ್ರಿ ಮನೆಯ ಹೊರಗೆ ಯಾರೂ ಇಲ್ಲದ್ದನ್ನು ಕಂಡು ಕಳ್ಳ ಮನೆ ಅಂಗಳ ಪ್ರವೇಶಿಸಿದ್ದನು. ಅಂಗಳದಲ್ಲಿದ್ದ ಅಡಿಕೆ ತುಂಬಿದ್ದ ಮೂಟೆ ಹೊತ್ತು ಕಳ್ಳ ಪರಾರಿಯಾಗಿದ್ದು, ಮನೆಯ ಗೇಟ್ ತೆರೆದಿದ್ದು ಅಡಿಕೆ ಮೂಟೆ ಕಾಣದ ಹಿನ್ನಲೆ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕಳ್ಳತನ ಬೆಳಕಿಗೆ ಬಂದಿದೆ.
ರಾತ್ರಿ 9 ಗಂಟೆ ವೇಳೆಗೆ ನಡೆದ ಕಳ್ಳತನ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕೂಡಲೇ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಹುಡುಕಾಡಿದಾಗ ಕಳ್ಳ ಪತ್ತೆಯಾಗಿದ್ದಾನೆ. ನಾರಾಯಣ ನಾಯ್ಕ ಅಡಿಕೆ ಮೂಟೆಯೊಂದಿಗೆ ಸಿಕ್ಕಿಬಿದ್ದ ಆರೋಪಿಯಾಗಿದ್ದು, ಮುಗ್ವಾ ಗ್ರಾಮದ ಬಂಕನಹಿತ್ತಲ್ ನಿವಾಸಿಯಾಗಿದ್ದಾನೆ.
ಅಡಿಕೆ ಸಾಗಿಸಲು ಸಹಕರಿಸಿದ ಆಟೋ ಚಾಲಕ ಸೇರಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.