ಮಂಗಳೂರು; ನಗರದ ಆ್ಯಂಟಿ ಪೋಲ್ಯೂಷನ್ ಡ್ರೆೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ನಾಗರಿಕ ಸಮಾಜ ಆಯೋಗಕ್ಕೆ ಸೇರ್ಪಡೆಯಾಗಿದೆ. ಈ ಮೂಲಕ ಎಪಿಡಿ ಪ್ರತಿಷ್ಠಾನ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕಲ್ಯಾಣಕ್ಕೆ ಕೊಡುಗೆ ನೀಡುವ ಜಾಗತಿಕ ಸಂಸ್ಥೆಗಳ ಜಾಲಕ್ಕೆ ಸೇರಿದೆ.
ನಾಗರಿಕ ಸಮಾಜ ಗುಂಪುಗಳೊಂದಿಗೆ ಸಹಯೋಗವನ್ನು ಪ್ರಾಮಾಣಿಕವಾಗಿ ರೂಪಿಸಲು ಮತ್ತು ಜಾಗತಿಕ ಆರೋಗ್ಯ ನೀತಿಯ ರೂಪುರೇಷೆ ರಚಿಸುವಲ್ಲಿ ಅವರ ಪಾತ್ರವನ್ನು ಬಲಪಡಿಸಲು ಡಬ್ಲ್ಯುಎಚ್‌ಒ ಈ ಆಯೋಗವನ್ನು ಸ್ಥಾಪಿಸಿದೆ. ಪ್ರಾಥಮಿಕ ಆರೋಗ್ಯ ರಕ್ಷಣೆ, ಆರೋಗ್ಯ ಸಮಾನತೆ, ಲಿಂಗ ಹಕ್ಕುಗಳು ಮತ್ತು ಸಮುದಾಯ ಆರೋಗ್ಯ ಪ್ರಚಾರ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಮೇಲೆ ಕೆಲಸ ಮಾಡುವ ಸಂಸ್ಥೆಗಳನ್ನು ಈ ವೇದಿಕೆ ಒಗ್ಗೂಡಿಸುತ್ತದೆ.

ನಗರ ನೈರ್ಮಲ್ಯ, ವಾಯು ಗುಣಮಟ್ಟ, ಘನ ತ್ಯಾಜ್ಯ ನಿರ್ವಹಣೆ ಮತ್ತು ಔದ್ಯೋಗಿಕ ಆರೋಗ್ಯದ ಕ್ಷೇತ್ರದಲ್ಲಿನ ತನ್ನ ಕೆಲಸಕ್ಕೆ ಹೆಸರುವಾಸಿಯಾದ ಎಪಿಡಿ ಪ್ರತಿಷ್ಠಾನ ಈಗ ಈ ಹೊಸ ವೇದಿಕೆಯ ಮೂಲಕ ಅಂತರರಾಷ್ಟ್ರೀಯ ಸಂವಾದಕ್ಕೆ ಕೊಡುಗೆ ನೀಡಲಿದೆ.
ಡಬ್ಲ್ಯುಎಚ್‌ಒ ನಾಗರಿಕ ಸಮಾಜ ಆಯೋಗದ ಸಹ-ಅಧ್ಯಕ್ಷರಾದ ರವಿ ರಾಮ್ ಮತ್ತು ಲಿಸಾ ಹಿಲ್ಮಿ ಅವರು ಆಯೋಗದ ಕಾರ್ಯದರ್ಶಿಯೊಂದಿಗೆ ಸಮಾಲೋಚನೆ ನಡೆಸಿದ ನಂತರ ಎಪಿಡಿ ಸದಸ್ಯತ್ವವನ್ನು ದೃಢೀಕರಿಸುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಜಗತ್ತಿನಾದ್ಯಂತ ಸುಮಾರು ೬೮೦ ಅರ್ಜಿಗಳನ್ನು ಆಯೋಗ ಪಡೆದುಕೊಂಡಿದ್ದು, ಡಬ್ಲ್ಯುಎಚ್‌ಒ ನ ಪರಿಶೀಲನಾ ಪ್ರಕ್ರಿಯೆ ನಂತರ ಹಂತ ಹಂತವಾಗಿ ಸದಸ್ಯರನ್ನು ಸೇರಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಡಬ್ಲ್ಯುಎಚ್‌ಒ ಆಯೋಗವು ತನ್ನ ಪ್ರಥಮ ವಾರ್ಷಿಕ ಮಹಾಸಭೆಯನ್ನು ಮಾರ್ಚ್ ೨೦೨೪ ರಲ್ಲಿ ನಡೆಸಿದ್ದು, ೨೦೨೪–೨೫ ರ ಕಾರ್ಯಯೋಜನೆಯನ್ನು ಅನುಮೋದಿಸಿದೆ ಮತ್ತು ಡಬ್ಲ್ಯುಎಚ್‌ಒ ಜೊತೆಗೆ ನಾಗರಿಕ ಸಮಾಜದ ಪಾಲ್ಗೊಳ್ಳುವಿಕೆಗಾಗಿ ಮಾರ್ಗದರ್ಶನ ನೀಡಲು ಮೂರು ಪ್ರಮುಖ ಕಾರ್ಯಪಡೆಗಳನ್ನು ರಚಿಸಿದೆ.

ಅಭಿವೃದ್ಧಿಯ ಕುರಿತು ಮಾತನಾಡಿದ ಎಪಿಡಿ ಪ್ರತಿಷ್ಠಾನ ಸಂಸ್ಥಾಪಕ ಅಬ್ದುಲ್ಲಾ ಎ. ರೆಹಮಾನ್, “ಮಂಗಳೂರು ನಗರ ಶುದ್ಧ ಗಾಳಿ, ಸಾರ್ವಜನಿಕ ನೈರ್ಮಲ್ಯ ಮತ್ತು ಸಮಾವೇಶಿತ ನಗರಾಭಿವೃದ್ಧಿಯಲ್ಲಿ ಚಿಕ್ಕ ನಗರಗಳು ಹೇಗೆ ಮುನ್ನಡೆಯಬಹುದು ಎಂಬುದನ್ನು ಪ್ರಚಾರವಿಲ್ಲದೇ ಸಾಧನೆ ಮಾಡಿದೆೆ. ಈ ಜಾಗತಿಕ ಸಂಘಟನೆಯಲ್ಲಿ ಸೇರುವುದರಿಂದ ನಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ದೊರಕುತ್ತದೆ ಮತ್ತು ಮೆಟ್ರೋ ಸ್ಥಾನಮಾನವಿಲ್ಲದ ನಗರಗಳಿಗೂ ಸಾರ್ವಜನಿಕ ಆರೋಗ್ಯದ ಭವಿಷ್ಯವನ್ನು ರೂಪಿಸುವಲ್ಲಿ ಧ್ವನಿಯನ್ನು ಎತ್ತಲು ವೇದಿಕೆ ನೀಡುತ್ತದೆ,” ಎಂದು ಗಮನಿಸಿದರು.
ನಾಗರಿಕ ಸಮಾಜ ಗುಂಪುಗಳು ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ಕಾಲಘಟ್ಟದಲ್ಲಿ ಅಂತರರಾಷ್ಟ್ರೀಯ ನೀತಿ ವೇದಿಕೆಗಳಲ್ಲಿ ತಳಮಟ್ಟದ ಪ್ರಾತಿನಿಧ್ಯವನ್ನು ಹೆಚ್ಚಿಸುವತ್ತ ಎಪಿಡಿ ಪ್ರತಿಷ್ಠಾನದ ಸೇರ್ಪಡೆಯು ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ
ಎಡಿಪಿ ಪ್ರತಿಷ್ಠಾನದ ಪರಿಚಯ;
ಎಡಿಪಿ ಪ್ರತಿಷ್ಠಾನ ಮಂಗಳೂರು ಮೂಲದ ಲಾಭರಹಿತ ಸಂಸ್ಥೆಯಾಗಿದ್ದು, ಸಾರ್ವಜನಿಕ ಆರೋಗ್ಯ, ಪರಿಸರ ಸುಸ್ಥಿರತೆ ಮತ್ತು ನಗರಾಡಳಿತ ಕ್ಷೇತ್ರಗಳಲ್ಲಿ ಮುಂದುವರಿದ ಬೆಳವಣಿಗೆಗಾಗಿ ಬದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯು “ಸ್ಮಾರ್ಟ್ ಸ್ವಚ್ಛ ಮಂಗಳೂರು” (ಯುಎನ್-ಹ್ಯಾಬಿಟಾಟ್ ಜೊತೆಗೆ), “ಪ್ರತಿ ಮನೆಗೆ ಶೌಚಾಲಯ”, “ಶುದ್ಧ ಗಾಳಿ” (ವಾಯು ಗುಣಮಟ್ಟ ಮತ್ತು ಹೊರಾಂಗಣ ಕಾರ್ಮಿಕರ ಆರೋಗ್ಯ), ಹಾಗೂ “ವೇಸ್ಟ್ ವೈಸ್ ಸಿಟೀಸ್” (ತ್ಯಾಜ್ಯ ಬುದ್ಧಿವಂತ ನಗರ) ಅಭಿಯಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಸ್ಥಳೀಯ ಸಂಸ್ಥೆಗಳ ಜೊತೆಗೆ ಘನತ್ಯಾಜ್ಯ ನಿರ್ವಹಣೆ, ನೈರ್ಮಲ್ಯ, ವಿದ್ಯುತ್ ಚಲನಶೀಲತೆ ಮತ್ತು ಜಾಗೃತಿ ಅಭಿಯಾನಗಳ ಕುರಿತು ಸ್ಥಳೀಯ ಸರ್ಕಾರಗಳೊಂದಿಗೆ ವ್ಯಾಪಕವಾಗಿ ಕೆಲಸ ಮಾಡಿದೆ. ಈ ಯೋಜನೆಗಳು ಸಾರ್ವಜನಿಕ ನೀತಿಯ ಮೇಲೆ ಪ್ರಭಾವ ಬೀರಲು ಮತ್ತು ಆರೋಗ್ಯಕರ ನಗರಗಳಿಗೆ ಆರೋಹ್ಯ ಮಾದರಿಗಳನ್ನು ರಚಿಸಲು ಜನಸಾಮಾನ್ಯ ಕ್ರಿಯೆಯನ್ನು ಡೇಟಾ-ಆಧಾರಿತ ವಕಾಲತ್ತುಗಳೊಂದಿಗೆ ಸಂಯೋಜಿಸುತ್ತವೆ.


