Saturday, June 6, 2026
Homeಕರಾವಳಿಅನ್ನಭಾಗ್ಯದ 540 ಕೆಜಿ ಅಕ್ಕಿ ವಶ; ದೂರು, ಪ್ರತಿದೂರು ದಾಖಲು

ಅನ್ನಭಾಗ್ಯದ 540 ಕೆಜಿ ಅಕ್ಕಿ ವಶ; ದೂರು, ಪ್ರತಿದೂರು ದಾಖಲು

- Advertisement -
- Advertisement -

ಕೋಟ: ಶಿರಿಯಾರ ಗ್ರಾಮದ ದೇವ ರೈಸ್‌ ಇಂಡಸ್ಟ್ರೀಸ್‌ಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಿಬಂದಿ ಮತ್ತು ತಹಶೀಲ್ದಾರರು ರವಿವಾರದಂದು ದಾಳಿ ನಡೆಸಿದ್ದು, ಅಕ್ರಮವಾಗಿ ದಾಸ್ತಾನಿರಿಸಿದ 540 ಕೆ.ಜಿ. ಅನ್ನಭಾಗ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಉಡುಪಿ ಆಹಾರ ಉಪನಿರೀಕ್ಷಕರಾದ ಜಯಮಾಧವ ಹಾಗೂ ಬ್ರಹ್ಮಾವರ ತಹಶೀಲ್ದಾರ್‌ ಶ್ರೀಕಾಂತ್‌ ಹೆಗ್ಡೆ, ಕೋಟ ಠಾಣೆ ಉಪನಿರೀಕ್ಷಕ ತೇಜಸ್ವಿ ಜತೆಯಾಗಿ ಖಚಿತ ಮಾಹಿತಿ ಮೇರೆಗೆ ರೈಸ್ ಇಂಡಸ್ಟ್ರೀಸ್ ಗೆ ದಾಳಿ ನಡೆಸಿದರು. ದಾಳಿಯ ಸಂದರ್ಭ ಆಹಾರ ನಿರೀಕ್ಷಕರಾದ ಶಿವರಾಜ್‌, ಸುರೇಶ್‌, ಲೀಲಾನಂದ ಹಾಗೂ ಸಿಬಂದಿ ಜತೆಗಿದ್ದರು. ಇಂಡಸ್ಟ್ರೀಸ್‌ ಮಾಲಕ‌ನ ಮೇಲೆ ಪ್ರಕರಣ ದಾಖಲಾಗಿದೆ.

ಕರ್ತವ್ಯಕ್ಕೆ ಅಡ್ಡಿ ದೂರು: ಕೋಟ ಕಂದಾಯ ನಿರೀಕ್ಷಕರಾದ ಮಂಜುನಾಥ ಅವರು ಮೇಲಧಿ ಕಾರಿಯವರ ಸೂಚನೆಯಂತೆ ರೈಸ್‌ ಇಂಡಸ್ಟ್ರೀಸ್‌ಗೆ ದಾಳಿ ನಡೆಸಿ ಜಿಪಿಎಸ್‌ ಫೊಟೋ ತೆಗೆಯಲು ಮುಂದಾದಾಗ ಸ್ಥಳೀಯರಾದ ಪ್ರಭಾಕರ ಅವರು ಮೊಬೈಲ್‌ ಫೋನನ್ನು ಎಳೆದು ಇಲಾಖಾ ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ್ದಾರೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರತಿದೂರು: ರೈಸ್‌ಮಿಲ್‌ ನನ್ನ ಸಂಬಂಧಿಯದು; ಘಟನೆಯ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದಾಗ ಅಧಿಕಾರಿಗಳೇ ನನ್ನ ಮೇಲೆ ಹಲ್ಲೆ ನಡೆಸಿ, ಸುಳ್ಳು ದೂರು ದಾಖಲಿಸಿದ್ದಾರೆ. ಈ ಬಗ್ಗೆ ನಾನು ಕೂಡ ಪೊಲೀಸರಿಗೆ ಪ್ರತಿದೂರು ನೀಡಿದ್ದು, ಕಾನೂನು ಹೋರಾಟ ನಡೆಸುವೆ ಎಂದು ಪ್ರಭಾಕರ ನಾಯಕ್‌ ಅವರು ಪತ್ರಿಕೆಗೆ ತಿಳಿಸಿದ್ದಾರೆ.

- Advertisement -

Latest News

error: Content is protected !!