ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದ ಆರೋಪಿ, ಶಂಕಿತ ಉಗ್ರ ಆದಿತ್ಯ ರಾವ್‌ನ ತನಿಖೆಗೆ ಪೂರಕವಾಗಿ ನಡೆಸಬೇಕಾಗಿದ್ದ ಬ್ರೈನ್ ಮ್ಯಾಪಿಂಗ್‌ಗೆ ಕೊರೋನ ವೈರಸ್ ಸೋಂಕು ಅಡ್ಡಿಯಾಗಿದೆ. ಪ್ರಕರಣದ ಚಾರ್ಜ್ ಶೀಟ್ ನ ಪೊಲೀಸರು ತಯಾರಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲು ರಾಜ್ಯ ಸರಕಾರದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆದಿತ್ಯ ರಾವ್‌ನನ್ನು ಬ್ರೈನ್ ಮ್ಯಾಪಿಂಗ್ ಮಾಡಿಸಲು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಿದೆ. ಆದರೆ ಕೊರೋನ ಹಾವಳಿಯನ್ನು ತಡೆಗಟ್ಟಲು ಲಾಕ್‌ಡೌನ್ ಘೋಷಿಸಿರುವುದರಿಂದ ಇದು ಸಾಧ್ಯವಾಗಿಲ್ಲ. ಆರೋಪ ಪಟ್ಟಿ ಸಲ್ಲಿಕೆಗೆ ಜಿಲ್ಲಾಡಳಿತದ ಅನುಮತಿ ಲಭಿಸಿದರೂ ರಾಜ್ಯ ಸರಕಾರದ ಅನುಮತಿ ಪಡೆಯಲಾಗದ ಕಾರಣ ಆರೋಪ ಪಟ್ಟಿ ಸಲ್ಲಿಕೆಗೆ ನಿಗದಿಪಡಿಸಿರುವ ಅವಧಿಯನ್ನು ವಿಸ್ತರಿಸುವಂತೆ ಮನವಿ ಸಲ್ಲಿಸಲಾಗಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ಆರೋಪಿಯ ಬ್ರೈನ್ ಮ್ಯಾಪಿಂಗ್ ಮತ್ತು ಆರೋಪ ಪಟ್ಟಿಗೆ ಸರಕಾರದ ಅನುಮತಿ ಪಡೆದು ಬಳಿಕ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಪ್ರಕಿಯೆ ನಡೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.