Saturday, May 18, 2024
Homeತಾಜಾ ಸುದ್ದಿಪುತ್ತೂರು: ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ: ನಾನು ಹಿಂದೂ, ಶ್ರೀರಾಮಚಂದ್ರನ ಭಕ್ತೆ ಎಂದು ಶೈಲಜಾ...

ಪುತ್ತೂರು: ರಾಮನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ: ನಾನು ಹಿಂದೂ, ಶ್ರೀರಾಮಚಂದ್ರನ ಭಕ್ತೆ ಎಂದು ಶೈಲಜಾ ಅಮರನಾಥ್ ಸ್ಪಷ್ಟನೆ

spot_img
- Advertisement -
- Advertisement -

ಪುತ್ತೂರು: ಕ್ಲಬ್ ಹೌಸ್ ನ ಚರ್ಚೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲಾತಾಣದ ಕಾರ್ಯದರ್ಶಿ, ಪುತ್ತೂರು ಕಾಂಗ್ರೆಸ್ ಮುಖಂಡ ಶೈಲಜಾ ಅಮರನಾಥ್ ತನ್ನ ಮೇಲೆ‌ ಬಂದಿರುವ ಆರೋಪಗಳಿಗೆ ಉತ್ತರ ನೀಡಿದ್ದಾರೆ. ಪುತ್ತೂರಿನ ತನ್ನ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಶೈಲಜಾ ಅಮರನಾಥ್ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ರಾಜ್ಯ ಬಿಜೆಪಿ ಸರಕಾರ ಈ ರೀತಿಯ ಕೃತ್ಯವನ್ನು ನಡೆಸುತ್ತಿದೆ. ಬಿಜೆಪಿಯ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಎಡಿಟ್ ಮಾಡಿದ ಆಡಿಯೋವನ್ನು ಪ್ರಸಾರ ಮಾಡಿ ತನ್ನ ತೇಜೋವಧೆ ಹಾಗೂ ತನ್ನ ಮೇಲೆ ಹಲ್ಲೆಗೆ ಪ್ರಚೋದಿಸಲಾಗುತ್ತಿದೆ. ಇದೇ ಕಾರಣಕ್ಕಾಗಿ ಕೆಲವು ದುಷ್ಕರ್ಮಿಗಳು ಮನೆ ಮೇಲೆಯೂ ದಾಳಿ ಮಾಡಿದ್ದಾರೆ. ಬಿಜೆಪಿ ಸರಕಾರ ಓರ್ವ ಮಹಿಳೆಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು, ನಾನೊಬ್ಬಳು ಹಿಂದೂ ಮತ್ತು ಅಪ್ಪಟ ದೈವ ಭಕ್ತೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸರಕಾರ ಹಿಂದೂ ಆಗಿರುವ ನನ್ನ ಮೇಲೆ ಹಿಂದೂಗಳನ್ನು ಎತ್ತಿಕಟ್ಟುವ ಮೂಲಕ ಮುಂದಿನ ಚುನಾವಣೆಯಲ್ಲಿ ಮತಪಡೆಯುವ ಷಡ್ಯಂತ್ರ ನಡೆಸುತ್ತಿದೆ. ಆದರೆ ನನ್ನ ರಕ್ಷಣೆಗೆ ನಿಂತಿರೋದು ಶ್ರೀರಾಮಚಂದ್ರನೇ ಹೊರತು ಪುಡಿ ರೌಡಿಗಳಲ್ಲ. ನನಗೆ ಮತ್ತು ದೇವರಿಗಿರುವ ಸಂಬಂಧ ಏನು ಎಂದು ದೇವರಿಗೆ ಗೊತ್ತಿದೆ. ನಾನೂ ಹಿಂದೂ, ನಾನು ದೈವಭಕ್ತೆ, ನನ್ನನ್ನು ದೇವರೇ ಕಾಪಡುತ್ತಾರೆ ಎಂದು ವಕೀಲೆ ಶೈಲಜಾ ಅಮರನಾಥ್ ತಿಳಿಸಿದ್ದಾರೆ.

ಪುತ್ತೂರು ಶಾಸಕ ಸಂಜೀವ ಮಠಂದೂರು ತನ್ನ ಹೇಳಿಕೆಗೆ ಹಿಂದೂಗಳ ಕ್ಷಮೆಯಾಚಿಸಬೇಕು. ಅವರ ಕ್ಷೇತ್ರದ ನಿವಾಸಿಯಾಗಿರುವ ಹೆಣ್ಣು ಮಗಳಿಗೆ ಸೂಕ್ತ ಭದ್ರತೆ ಒದಗಿಸದ ಶಾಸಕರು ಮೊದಲು ಕ್ಷಮೆ ಕೋರಬೇಕು. ಮುಂದಿನ 48 ಗಂಟೆಗಳಲ್ಲಿ ಪೋಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಬೇಕು. ಕ್ಲಬ್ ಹೌಸ್ ನಲ್ಲಿ ನಡೆದ ಅಸಲಿ ಆಡಿಯೋವನ್ನು ಪೋಲೀಸರು ಪರಿಶೀಲನೆ ನಡೆಸಬೇಕು. ಎಡಿಟೆಡ್ ಆಡಿಯೋ ವನ್ನು ಪ್ರಸಾರ ಮಾಡಿದ ಯೂಟ್ಯೂಬ್ ಚಾನಲ್ ನ ಸಿಬ್ಬಂದಿಗಳನ್ನು ತನಿಖೆ ನಡೆಸಬೇಕು. ಇಲ್ಲದೇ ಹೋದಲ್ಲಿ ಪೋಲೀಸ್ ಠಾಣೆಯ ಮುಂದೆ ನನ್ನನ್ನು ಅರೆಸ್ಟ್ ಮಾಡಿ ಎನ್ನುವ ಬೋರ್ಡ್ ಹಿಡಿದು ಧರಣಿ ನಡೆಸುವುದಾಗಿ ಎಚ್ಚರಿಕೆಯನ್ನು ಶೈಲಜಾ ಅಮರನಾಥ್ ನೀಡಿದ್ದಾರೆ.

ಜೂನ್ 16 ರಂದು ಕ್ಲಬ್ ಹೌಸ್ ನಲ್ಲಿ ‘ಸಂಡೆ ಅಂಕಲ್ ಮಂಡೇ ಸನ್ಸ್’ ಎಂಬ ಗ್ರೂಪ್ ರಚಿಸಿ ರಾಮನ ಬಗ್ಗೆ,ಸೀತೆಯ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಅವಹೇಳನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಹಿಂದೂ ದೇವರ ಅವಹೇಳನ ಮಾಡಿರುವ ಕಾಂಗ್ರೆಸ್ ಐಟಿ ಸೆಲ್ ನ ಕಾರ್ಯದರ್ಶಿ ಶೈಲಜಾ ಅಮರ‌ನಾಥ, ಪ್ರೀತು ಶೆಟ್ಟಿ, ಅನೀಲ್, ಪುನಿತ್ ಇತರರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸಾಮಾಜಿಕ ಜಾಲತಾಣ ಕ್ಲಬ್ ಹೌಸ್ ನಲ್ಲಿ ಶ್ರೀರಾಮ, ಸೀತೆ, ಹನುಮಂತ ದೇವರನ್ನು ಅಶ್ಲೀಲವಾಗಿ ಅವಹೇಳನ ಮಾಡಲಾಗಿದೆ. ಶ್ರೀರಾಮ ಸಲಿಂಗಕಾಮಿ, ರಾಮನಿಗೆ ಹಂದಿ ಮಾಂಸ ಇಷ್ಟ ಎಂದು ಅವಹೇಳನ ಮಾಡಿದ್ದು,ಹಿಂದೂಗಳ ಧಾರ್ಮಿಕ ನಂಬಿಕೆಗೆ ಭಾವನೆಗೆ ಧಕ್ಕೆ ತಂದಿರುವುದಾಗಿ ದೂರು ನೀಡಲಾಗಿತ್ತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯವನ್ನು ಮಾಡಿತ್ತು.

ಕ್ಲಬ್ ಹೌಸ್ ನಲ್ಲಿ ನಡೆದ ವಿವಾದಾತ್ಮಕ ಚರ್ಚೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ಧಂತೆ ಈ ಆಡಿಯೋಗೆ ಜನ ಆಕ್ರೋಶ ವ್ಯಕ್ತಪಡಿಸಿದರು. ಪುತ್ತೂರಿನ ಬಪ್ಪಳಿಗೆಯಲ್ಲಿರುವ ನ್ಯಾಯಾವಾದಿ ಶೈಲಜಾ ಅವರ ಮನೆಗೆ ಕೆಲವು ಯುವಕರು ನುಗ್ಗಿ ಕಿಟಕಿ ಗ್ಲಾಸ್ ಗಳನ್ನು ಧ್ವಂಸ ಮಾಡಿದ್ದರು. ಮನೆ ಗೋಡೆಗಳಿಗೆ ಕಪ್ಪು ಮಸಿ ಎರಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆ ನಂತರ ಶೈಲಜಾ ಮನೆಗೆ ಪುತ್ತೂರು ನಗರ ಪೊಲೀಸ್ ಭದ್ರತೆ ನೀಡಿದ್ದರು

- Advertisement -
spot_img

Latest News

error: Content is protected !!