ಮಂಗಳೂರು: ಕೊಲೆ, ದೊಂಬಿ ಪ್ರಕರಣವೊಂದರ ಆರೋಪಿಯನ್ನು ಸ್ಟ್ರೆಚರ್ ಸಹಾಯದಿಂದ ನಗರದ ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲಾ ಕೋರ್ಟ್‌ನಲ್ಲಿ ಗುರುವಾರ ನಡೆದಿದೆ.
ಹಲವು ವರ್ಷಗಳ ಹಿಂದೆ ಅಡ್ಡೂರಿನ ಮಹಮ್ಮದ್ ಎಂಬಾತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ದೊಂಬಿ, ಕೊಲೆ ಪ್ರಕರಣ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನಿಗೆ ಕೋರ್ಟ್‌ಗೆ ಹಾಜರಾಗುವಂತೆ ವಾರಂಟ್ ಹೊರಡಿಸಲಾಗಿತ್ತು.
ಗುರುವಾರ ಆಸೀಫ್ ಅವರು ಮಹಮ್ಮದ್ ರನ್ನು ಆಂಬ್ಯುಲೆನ್ಸ್‌ನಲ್ಲೇ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದು, ಸ್ಟ್ರೆಚರ್‌ನಲ್ಲೇ ಮಲಗಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಧೀಶರು, ಆರೋಪಿಯ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಯು ಅಸೌಖ್ಯದಿಂದ ಹಾಸಿಗೆ ಹಿಡಿದಿರುವಾಗ ಅವರನ್ನು ಇಂತಹ ಪರಿಸ್ಥಿತಿಯಲ್ಲಿ ಕೋರ್ಟ್‌ನ ಮುಂದೆ ಹಾಜರುಪಡಿಸುವ ಅವಶ್ಯಕತೆ ಏನಿತ್ತು?. ಏಕೆ ಒತ್ತಡ ಹಾಕಿದ್ದೀರಿ?. ಆರೋಪಿಯ ವಾಸ್ತವ ಸ್ಥಿತಿಯನ್ನು ವಿವರಿಸಿದರೆ ಸಾಕಿತ್ತಲ್ಲವೇ? ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಂತರ ಆರೋಪಿಯನ್ನು ಆಸೀಫ್ ಅವರು ಆಂಬ್ಯುಲೆನ್ಸ್‌ನಲ್ಲಿ ಅನಾಥಾಶ್ರಮಕ್ಕೆ ಕರೆದೊಯ್ದಿದ್ದಾರೆ. ಆರೋಪಿ ಮಹಮ್ಮದ್‌ನ ಪರಿಸ್ಥಿತಿಯನ್ನು ಕಂಡ ವಕೀಲ ಫಾರೂಕ್ ಎನ್ನುವವರು ಇನ್ನು ಮುಂದಿನ ದಿನಗಳಲ್ಲಿ ಆರೋಪಿ ಪರ ಕೋರ್ಟ್‌ನಲ್ಲಿ ಉಚಿತ ವಕಾಲತ್ತು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಅಡ್ಡೂರಿನ ಮಹಮ್ಮದ್ ಅಸೌಖ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದು, ಆತನಿಂದ ಕುಟುಂಬ ವರ್ಗ ದೂರವಾಗಿ ಅನಾಥವಾಗಿದ್ದರು. ಈ ವಿಚಾರ ಆಪದ್ಭಾಂಧವ ಆಸೀಫ್ ಗಮನಕ್ಕೆ ಬಂದಿದ್ದು, ಅಡ್ಡೂರಿಗೆ ತೆರಳಿ ಮಹಮ್ಮದ್ ರನ್ನು ಮೂಲ್ಕಿ ಕಾರ್ನಾಡುವಿನ ಅನಾಥಾಶ್ರಮಕ್ಕೆ ಸೇರಿಸಿದ್ದಾರೆ. ಅಲ್ಲಿ ಮೂರು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಮ್ಮದ್ ರನ್ನು ಆ.12ರಂದು ಕೋರ್ಟ್‌ಗೆ ಹಾಜರುಪಡಿಸುವಂತೆ ಆಸೀಫ್‌ಗೆ ಪೊಲೀಸರು ತಿಳಿಸಿದ್ದರು. ಈ ವೇಳೆ ಆಸೀಫ್, ಮಹಮ್ಮದ್ ಅಸೌಖ್ಯದಿಂದ ಹಾಸಿಗೆ ಹಿಡಿದಿದ್ದು, ಕೋರ್ಟ್‌ಗೆ ಹಾಜರಾಗಲು ಕಷ್ಟ ಎಂದಿದ್ದರು. ಆದರೆ, ಪೊಲೀಸರು ಮಹಮ್ಮದ್ ರನ್ನು ಕೋರ್ಟ್‌ಗೆ ಹಾಜರುಪಡಿಸಲೇಬೇಕು ಎಂದು ಒತ್ತಡ ಹಾಕಿದ್ದರು ಎಂದು ಹೇಳಲಾಗಿದೆ.


