ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಬಸ್ಸಿಗೆ ಕಾಯುತ್ತಿದ್ದ ವ್ಯಕ್ತಿಯೊಬ್ಬರ ಪ್ಯಾಂಟಿನ ಕಿಸೆಯಿಂದ 1 ಲಕ್ಷ ರೂಪಾಯಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಕೇರಳದ ತ್ರಿಶೂರ್ ಜಿಲ್ಲೆಯ ನಝೀರ್ ಪುನ್ನಯ್ಯರು ಬಂಧಿತ ಆರೋಪಿ.
ಕುಂದಾಪುರದ ರಂಗನಾಥ ಬೆಳ್ಳಾಲ ಅವರು ತಮ್ಮ ಕಾರನ್ನು ಮಾರಿ ಬೇರೆ ಹಳೆ ಕಾರನ್ನು ಖರೀದಿಸುವ ಉದ್ದೇಶದಿಂದ ಆ. 14ರಂದು ಬಿ.ಸಿ.ರೋಡಿಗೆ ಬಂದಿದ್ದರು. ದಾಖಲೆಗಳು ಸರಿ ಇಲ್ಲ ಎನ್ನುವ ಕಾರಣಕ್ಕೆ ಕಾರು ಖರೀದಿಸದೆ ಅಂದು ಕೈಕಂಬದ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು ಮರುದಿನ ಅ. 15ರಂದು ಕೊಟ್ಟಿಗೆಹಾರಕ್ಕೆ ಹೋಗಲು ಬಿ.ಸಿ.ರೋಡು ನಿಲ್ದಾಣದಲ್ಲಿ ಬಸ್ಸಿಗೆ ಕಾಯುತ್ತಿದ್ದರು. ಈ ವೇಳೆ ಅವರ ಪ್ಯಾಂಟಿನ ಕಿಸೆಯಲ್ಲಿ 50 ಸಾವಿರ ರೂ.ಗಳ 3 ಕಂತೆ ಹಾಗೂ 10 ಸಾವಿರ ರೂ.ಗಳ 1 ಕಂತೆ ಸೇರಿ ಒಟ್ಟು 1.60 ಲಕ್ಷ ರೂ. ಹಣವಿತ್ತು. ಅವರು ಬಸ್ಸಿಗೆ ಹತ್ತಿದ ಬಳಿಕ ಕಿಸೆ ನೋಡಿದಾಗ ನಗದು ಕಳವಾಗಿರುವುದು ಅರಿವಿಗೆ ಬಂದಿದ್ದು, ಅದರಲ್ಲಿ 50 ಸಾವಿರ ರೂ.ಗಳ 2 ಕಂತೆ ಸೇರಿ 1 ಲಕ್ಷ ರೂ. ಕಳವಾಗಿತ್ತು. ಈ ಕುರಿತು ಅವರು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಂಟ್ವಾಳ ನಗರ ಪೊಲೀಸ್ ಇನ್ಸ್‌ಪೆಕ್ಟರ್ ಅನಂತಪದ್ಮನಾಭನೇತೃತ್ವದ ತಂಡ ಆರೋಪಿಯ ಪತ್ತೆಗೆ ತನಿಖೆ ನಡೆಸಿ ಮಂಗಳೂರಿನಲ್ಲಿ ಬಂಧಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದೆ.


