ಬಳ್ಳಾರಿ: ಬಳ್ಳಾರಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ಅವರನ್ನು ನೋಡಬೇಕು, ಅವರ ಜತೆ ಒಂದೆರಡು ಮಾತನಾಡಬೇಕು, ನಾನು ಅವರನ್ನು ಮದುವೆಯಾಗಲು ಸಿದ್ದಳಿದ್ದೇನೆ ಎಂದು ಮಹಿಳಾ ಅಭಿಮಾನಿಯೊಬ್ಬರು ಪಟ್ಟು ಹಿಡಿದ ಘಟನೆ ಜೈಲಿನ ಎದುರು ನಡೆದಿದೆ.
ಬೆಂಗಳೂರಿನ ಆರ್ ಆರ್ ನಗರ ನಿವಾಸಿ, ಕಲಬುರಗಿ ಮೂಲದ ಲಕ್ಷ್ಮೀ ಎನ್ನುವ ಮಹಿಳೆ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಗುರುವಾರ ಬೆಳಗ್ಗೆ ಆಗಮಿಸಿದ್ದಾರೆ. ಅವರು ನಟ ದರ್ಶನ್ ಅವರನ್ನು ನೊಡಲೇ ಬೇಕು ಎಂದು ಜೈಲಿನ ಎದುರೇ ಪಟ್ಟು ಹಿಡಿದು ಕೂತಿದ್ದು, ಜೈಲು ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ಜೈಲಿನ ಭದ್ರತಾ ಸಿಬ್ಬಂದಿ ದರ್ಶನ್ ನೋಡಲು ಸಂಬಂಧಿಗಳಿಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದ್ದಾರೆ.
ಇನ್ನು ಆ ಮಹಿಳೆ ನಾನು ದರ್ಶನ್ ಅವರುನ್ನು ಮದುವೆಯಾಗಲು ಸಿದ್ಧಳಿದ್ದೇನೆ. ವಿಜಯಲಕ್ಷ್ಮಿ ರೀತಿ ನಾನೂ ಕೂಡ ಮದುವೆಯಾಗುತ್ತೇನೆ. ನನಗೆ ದರ್ಶನ್ ಅಂದರೆ ಇಷ್ಟ. ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಹೋದರೂ ಭೇಟಿಯಾಗಲು ಬಿಡಲಿಲ್ಲ. ಈಗ ಇಲ್ಲಿಗೆ ಬಂದಿದ್ದು, ನಟ ದರ್ಶನ್ ಅವರಿಗೆ ಹಣ್ಣು ಕೊಟ್ಟು ನೋಡಿ ಹೊಗುವೆ ಎಂದು ಪಟ್ಟು ಹಿಡಿದಿದ್ದಾರೆ. ಕೊನೆಗೂ ಲಕ್ಷ್ಮೀ ಅವರನ್ನು ಜೈಲಿನ ಸಿಬ್ಬಂದಿ ಮನವೊಲಿಸಿ ವಾಪಾಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.