ಮಂಗಳೂರಿನಲ್ಲೊಂದು ವಿಚಿತ್ರ ಘಟನೆ ಘಟನೆ ನಡೆದಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ವೃದ್ಧೆರೊಬ್ಬರು ಮನೆಗೆ ಬರುತ್ತಿದ್ದಂತೆ ಜೀವಂತವಾಗಿರೋದು ಬೆಳಕಿಗೆ ಬಂದಿದೆ.
ಅಸ್ತಮಾದಿಂದ ಬಳಲುತ್ತಿದ್ದ ಕಾಸರಗೋಡಿನ ಕುಂಬಳೆಯ ರಾಮನಾಥ ಗಟ್ಟಿ (70) ಎಂಬವರನ್ನು ಎರಡು ದಿನಗಳ ಹಿಂದೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು, ಇವರ ಸ್ಥಿತಿ ಗಂಭೀರವಿದ್ದು, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದರೆ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ಹೀಗಾಗಿ ಮನೆಮಂದಿ ದೇರಳಕಟ್ಟೆ ಕೆಎಸ್‌ಹೆಗ್ಡೆ ಆಸ್ಪತತ್ರೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ ಡ್ಯೂಟಿ ಡಾಕ್ಟರ್ ಪರೀಕ್ಷೆ ಮಾಡಿ ಇವರ ಸ್ಥಿತಿ ಸೀರಿಯಸ್ ಇದೆ. ಹೇಳಿಕ್ಕಾಗಲ್ಲ. ನೀವು ಬೇರೆಲ್ಲಾದರೂ ಕರೆದುಕೊಂಡು ಹೋಗಿ ಎಂದು ಹೇಳಿದ್ದು, ನಾವು ಗ್ಯಾರಂಟಿ ಕೊಡುವುದಿಲ್ಲ ಎಂದು ಹೇಳಿದ್ದಾರೆ.
ಮತ್ತೆ ಕುಟುಂಬ ಸದಸ್ಯರು ಯೆನಪೋಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ಡ್ಯೂಟಿ ವೈದ್ಯರೊಬ್ಬರು ರಮಾನಾಥ ಗಟ್ಟಿಯವರು ಸಾವಿಗೀಡಾಗಿದ್ದಾರೆಂದು ತಿಳಿಸಿದ್ದಾರೆ. ಈ ಘಟನೆ ಅ.19 ರಂದು ರಾತ್ರಿ ನಡೆದಿದ್ದು, ನೀವು ಶವವನ್ನು ಮರಳಿ ಮನೆಗೆ ಒಯ್ಯಬಹುದು ಎಂದು ತಿಳಿಸಿದ್ದಾರೆ. ರಾತ್ರಿಯೇ ಒಯ್ಯದಿದ್ದರೆ ಶವಾಗಾರದಲ್ಲಿ ಇಡಬೇಕು. ಅಲ್ಲಿಟ್ಟರೆ ಮತ್ತೆ ಬಿಲ್ ಆಗುತ್ತದೆ ಎಂದು ಮನೆಮಂದಿ ರಾತ್ರಿಯೇ ಶವವನ್ನು ಮನೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ರೆಡಿ ಮಾಡಿದರು. ನಂತರ ಶವಕ್ಕೆ ತೊಡಿಸುವ ಬಿಳಿ ವಸ್ತ್ರ ತೊಡಿಸಿ ಆಂಬುಲೆನ್ಸ್ ಹೊರಟಿದ್ದು, ಮನೆಯ ಪರಿಸರದಲ್ಲಿ ರಾತ್ರಿಯೇ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು. ಸುತ್ತಮುತ್ತಲಿನವರೆಲ್ಲಾ ಸೇರಿದ್ದರು. ಆದರೆ ಕುಂಬಳೆ ತಲುಪುವ ಮೊದಲೇ ರಮಾನಾಥ ಗಟ್ಟಿಯವರ ಕಾಲು ಅಲುಗಾಡಿದೆ. ಕೂಡಲೇ ಜೊತೆಗಿದ್ದವರು ಮುಖದ ವಸ್ತ್ರ ತೆಗೆದು ನೋಡಿದ್ದಾರೆ. ಅರೆ ಜೀವ ಇರುವುದು ತಿಳಿದು ನೇರವಾಗಿ ಕಾಸರಗೋಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಕೃತಕ ಉಸಿರಾಟ ನೀಡಿ, ವೈದ್ಯರು ಐಸಿಯುನಲ್ಲಿ ಇರಿಸಿದ್ದಾರೆ. ಎರಡು ದಿನ ಕಳೆದಿದ್ದು ಗಟ್ಟಿಯವರ ಆರೋಗ್ಯ ಸ್ಥಿತಿ ಚೆನ್ನಾಗಿದೆ ಎನ್ನಲಾಗಿದೆ.


