Wednesday, June 17, 2026
Homeಕರಾವಳಿಮಂಗಳೂರುಉಪ್ಪಿನಂಗಡಿ;ಅಪರಿಚಿತನ ಮಾತನ್ನು ನಂಬಿ ಬೈಕ್ ಕೊಟ್ಟು ವಂಚನೆಗೊಳಗಾದ ವ್ಯಕ್ತಿ

ಉಪ್ಪಿನಂಗಡಿ;ಅಪರಿಚಿತನ ಮಾತನ್ನು ನಂಬಿ ಬೈಕ್ ಕೊಟ್ಟು ವಂಚನೆಗೊಳಗಾದ ವ್ಯಕ್ತಿ

- Advertisement -
- Advertisement -

ಉಪ್ಪಿನಂಗಡಿ;ಅಪರಿಚಿತನ ಮಾತನ್ನು ನಂಬಿ ಆತನಿಗೆ ಬೈಕ್ ಕೊಟ್ಟು ವ್ಯಕ್ತಿಯೊಬ್ಬರು ವಂಚನೆಗೊಳಗಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ಶ್ರೀ ದೇವಿ ಸ್ಟಿಕ್ಕರ್ ಕಟಿಂಗ್ಸ್ ಸೆಂಟರ್‌ನ ಮಾಲೀಕ ಶೀನಪ್ಪ ವಂಚನೆಗೊಳಗಾದವರು.

ಕಳೆದ ಮೂರು ದಿನಗಳಿಂದ ಸಮೀಪದ ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬ ತನ್ನನ್ನು ಶ್ಯಾಮ್ ಜಿ. ಕೃಷ್ಣನ್ ಎಂದು ಶೀನಪ್ಪ ಅವರಿಗೆ ಪರಿಚಯಿಸಿಕೊಂಡು ಅವರೊಂದಿಗೆ ಸ್ನೇಹ ಬೆಳೆಸಿದ್ದಾನೆ. ಸೋಮವಾರ ಶೀನಪ್ಪ ಅವರ ಅಂಗಡಿಗೆ ಬಂದಿದ್ದ ಆರೋಪಿ, ಮಂಗಳವಾರ ಉಪ್ಪಿನಂಗಡಿ ದೇವಸ್ಥಾನದಲ್ಲಿ ಪೂಜೆ ಇರುವುದಾಗಿ ತಿಳಿಸಿದ್ದ. ಬಳಿಕ ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆಗೆ ಅಂಗಡಿಗೆ ಬಂದು, ದೇವಸ್ಥಾನದಲ್ಲಿರುವ ತನ್ನ ಮನೆಯವರಿಗೆ ಬಟ್ಟೆ ನೀಡಿಬಂದು ಎರಡು ನಿಮಿಷಗಳಲ್ಲಿ ವಾಪಸ್ ಬರುತ್ತೇನೆ ಎಂದು ಹೇಳಿ ಬೈಕ್ ಕೇಳಿದ್ದಾನೆ.

ಮೊದಲಿಗೆ ಬೈಕ್ ನೀಡಲು ಹಿಂಜರಿದ ಶೀನಪ್ಪ ಅವರನ್ನು ಮಾತಿನ ಚಾತುರ್ಯದಿಂದ ಒಪ್ಪಿಸಿಕೊಂಡ ಆತ, ಬೈಕ್ ಪಡೆದುಕೊಂಡು ತೆರಳಿದ್ದಾನೆ. ದಾರಿಯಲ್ಲಿ ಪೊಲೀಸರು ತಪಾಸಣೆ ನಡೆಸಬಹುದು ಎಂದು ಭಾವಿಸಿ ಶೀನಪ್ಪ ತಮ್ಮ ಹೆಲ್ಮೆಟ್‌ನ್ನೂ ನೀಡಿದ್ದರು.ಆದರೆ, ಎರಡು ನಿಮಿಷಗಳಲ್ಲಿ ಬರುತ್ತೇನೆಂದು ಹೇಳಿ ತೆರಳಿದ ವ್ಯಕ್ತಿ ಬಹಳ ಹೊತ್ತಾದರೂ ವಾಪಸ್ ಬರಲಿಲ್ಲ. ಅನುಮಾನಗೊಂಡ ಶೀನಪ್ಪ ಅವರು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಆರಂಭದಲ್ಲಿ ಬೈಕ್‌ ದೇವಸ್ಥಾನದ ಬಳಿ ಇರುವುದಾಗಿ ಹೇಳಿದ ಆತ, ನಂತರ ತಾನು ಸಕಲೇಶಪುರದಲ್ಲಿದ್ದೇನೆ ಎಂದು ತಿಳಿಸಿದ್ದಾನೆ. ಅಲ್ಲದೆ, ಬೈಕ್ ಬೇಕಿದ್ದರೆ ₹20 ಸಾವಿರ ಹಣದೊಂದಿಗೆ ಸಕಲೇಶಪುರಕ್ಕೆ ಬಂದು ಪಡೆದುಕೊಳ್ಳುವಂತೆ ತಾಕೀತು ಮಾಡಿದ್ದಾನೆ ಎನ್ನಲಾಗಿದೆ. ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ಶೀನಪ್ಪ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇನ್ನು ಲಾಡ್ಜ್ ನಲ್ಲಿ ನೀಡಲಾದ ಆಧಾರ್ ಕಾರ್ಡ್ ದಾಖಲೆಯ ಪ್ರಕಾರ, ಆತ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದ ಅಚಂಗಿ ಮನೆ ನಿವಾಸಿ ಗೋಪಾಲಕೃಷ್ಣನ್ ಅವರ ಪುತ್ರನಾಗಿದ್ದಾನೆ ಎನ್ನಲಾಗಿದೆ. ಸದ್ಯ ವಂಚಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.

- Advertisement -

Latest News

error: Content is protected !!