ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರಿನಲ್ಲಿ ವಿಜಯೋತ್ಸವ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದ ಘಟನೆಗೆ ಪ್ರಚೋದನಾಕಾರಿ ಘೋಷಣೆ ಮುಖ್ಯ ಕಾರಣವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಪೊಲೀಸ್ ಆಯುಕ್ತರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ, ‘ಮೆರವಣಿಗೆ ಮುಗಿಸಿ ಭಾರತ್ ಮಾತಾ ಕಿ ಜೈ ಘೋಷಣೆ ಮಾಡಿದ್ದಾರೆ. ಆದರೆ ಇದರಿಂದ ಪ್ರಚೋದನೆಗೊಂಡಿಲ್ಲ. ಇದಕ್ಕೂ ಮೊದಲು ಮೆರವಣಿಗೆಯಲ್ಲಿ ಆಟೋ ನಿಲ್ದಾಣದ ಸಮೀಪ ಪಾಕಿಸ್ತಾನಕ್ಕೆ ಸಂಬಂಧ ಕಲ್ಪಿಸಿ ಆಕ್ಷೇಪಾರ್ಹ ಘೋಷಣೆಯನ್ನು ಕೂಗಿದ್ದಾರೆ. ಇದು ಸೋಶಿಯಲ್ ಮೀಡಿಯಾದ ಮೂಲಕ ಸಮುದಾಯದವರಿಗೆ ಗೊತ್ತಾಗಿದೆ. ಇದರಿಂದ ಕೆಲವರು ಪ್ರಚೋದನೆಗೊಂಡು ಕೃತ್ಯ ನಡೆಸಿದ್ದಾರೆ,’ ಎಂದು ತಿಳಿಸಿದ್ದಾರೆ.
ಚೂರಿ ಇರಿದ ಪ್ರಕರಣದಲ್ಲಿ ಒಟ್ಟು 20 ಮಂದಿ ಆರೋಪಿಗಳ ಪೈಕಿ 6 ಮಂದಿಯನ್ನು ಬಂಧಿಸಲಾಗಿದೆ. ಚೂರಿ ಇರಿದವರಲ್ಲಿ ಓರ್ವ ರೌಡಿಶೀಟರ್ ಕೂಡ ಸೇರಿದ್ದಾನೆ. ಪ್ರಚೋದನಾಕಾರಿ ಘೋಷಣೆ ಕೂಗಿದವರ ವಿರುದ್ದವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಶಾಂತಿ ಸುವ್ಯವಸ್ಥೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ನಾಳೆಯಿಂದ ಠಾಣೆಗಳಲ್ಲಿಯೂ ಶಾಂತಿ ಸಭೆ ನಡೆಸಲಾಗುವುದು ಎಂದವರು ತಿಳಿಸಿದರು.
—


